ದೊಡ್ಡಬಳ್ಳಾಪುರ: ಗ್ರಾಮದ ಅಶಾಂತಿಗೆ ಕಾರಣವಾಗಿದ್ದ ಪ್ರತಿಮೆಗಳ ವಿವಾದ ತಹಶೀಲ್ದಾರ್ ಮತ್ತು ಡಿವೈಎಸ್ಪಿ ಅವರ ಸಂಧಾನದಿಂದ ಸಫಲವಾಗಿದ್ದು, ಪರಸ್ಪರ ಒಪ್ಪಿಗೆಯಲ್ಲಿ ಪ್ರತಿಮೆಗಳ ತೆರವು ಕಾರ್ಯ ನಡೆಯಿತು.
ತಾಲೂಕಿನ ಕೊಡಿಗೇಹಳ್ಳಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಇದಕ್ಕಿದಂತೆ ಕೆಂಪೇಗೌಡರ ಪ್ರತಿಮೆ ಕಾಣಿಸಿಕೊಂಡಿತ್ತು. ಇದು ಮತ್ತೊಂದು ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದು, ಅವರು ಸಹ ರಾತ್ರೋರಾತ್ರಿ ಶಿವಕುಮಾರ ಸ್ವಾಮೀಜಿಯವರ ಚಿತ್ರ ಇರುವ ಕಲ್ಲನ್ನು ಸ್ಥಾಪಿಸಿಬಿಟ್ಟಿದ್ದರು. ಬಳಿಕ ಎರಡು ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದು ವಿವಾದ ವಿಕೋಪಕ್ಕೆ ತಿರುಗಿತ್ತು.
ಇದೀಗ ಪರಿಸ್ಥಿತಿಯ ಗಂಭೀರತೆ ಅರಿತ ತಹಶೀಲ್ದಾರ್ ಮೋಹನಕುಮಾರಿ ಮತ್ತು ಡಿವೈಎಸ್ಪಿ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಪ್ರತಿಮೆ ವಿವಾದವನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದೇ ಸ್ಥಳದಲ್ಲಿ ಎರಡು ಪ್ರತಿಮೆಗಳ ಸ್ಥಾಪನೆಯಿಂದಾಗಿ ರಸ್ತೆ ಮತ್ತೂ ಕಿರಿದಾಗಿತ್ತು. ಅಲ್ಲದೇ ಪ್ರತಿಮೆಗಳು ಇದ್ದ ಜಾಗವು ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಬರುತ್ತಿತ್ತು. ಹೀಗಾಗಿ ಪ್ರತಿಮೆ ಸ್ಥಾಪನೆಯು ರಸ್ತೆ ಅಪಘಾತಗಳಿಗೂ ಕಾರಣವಾಗಿತ್ತು. ಎರಡು ಸಮುದಾಯವರು ಪ್ರತಿಮೆ ಸ್ಥಾಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆದಿರಲಿಲ್ಲ.
ಈ ಎಲ್ಲ ಸಂಗತಿಗಳನ್ನು ತಹಶೀಲ್ದಾರ್ ಮತ್ತು ಡಿವೈಎಸ್ಪಿ ಗ್ರಾಮಸ್ಥರಿಗೆ ಮನದಟ್ಟು ಮಾಡಿದ್ದು, ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಎರಡು ಸಮುದಾಯವರು ತಾವೇ ಪ್ರತಿಮೆಗಳನ್ನು ತೆರವು ಮಾಡಿದ್ದಾರೆ. ಪ್ರತಿಮೆ ವಿವಾದ ಸುಖಾಂತ್ಯ ಕಂಡಿದ್ದು, ಗ್ರಾಮಸ್ಥರ ಖುಷಿಗೆ ಕಾರಣವಾಗಿದೆ.
ಇದನ್ನೂ ಓದಿ:ಪ್ರತಿಮೆ ಸ್ಥಾಪನೆ ವಿಚಾರ ಎರಡು ಸಮುದಾಯದಲ್ಲಿ ಘರ್ಷಣೆ: ಕೊಡಿಗೇಹಳ್ಳಿಯಲ್ಲಿ ಪೊಲೀಸ್ ಬಿಗಿ ಭದ್ರತೆ