ದೊಡ್ಡಬಳ್ಳಾಪುರ (ಬೆಂ.ಗ್ರಾಮಾಂತರ): ಕೋಳಿ ಖರೀದಿಸಲು ತೆರಳುತ್ತಿದ್ದ ಕೋಳಿ ಸಾಗಾಣಿಕಾ ವಾಹನ ಅಡ್ಡಗಟ್ಟಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ 7 ಲಕ್ಷ 64 ಸಾವಿರ ರೂ. ನಗದು ದೋಚಿದ್ದ ಮೂವರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಅಜಯ್ (28), ಗಂಟಿಗಾನಹಳ್ಳಿಯ ಪುನೀತ್ (25) ಹಾಗೂ ತರುಹುಣುಸೆ ಗ್ರಾಮದ ಶ್ರೀಧರ್ (27) ಬಂಧಿತರು. ಆರೋಪಿಗಳ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ಪ್ರಕರಣ: ಮಾರ್ಚ್ 7ರಂದು ನಗರದ ಎಪಿಎಂಸಿ ಮುಂಭಾಗದಲ್ಲಿರುವ ಹೆಚ್.ಎ.ಜೆ ಚಿಕನ್ ಸೆಂಟರ್ ಕಾರ್ಮಿಕರಾದ ಲಕ್ಷ್ಮೀಪತಿ, ಮಂಜುನಾಥ್, ಶ್ರೀಧರ್ ಎನ್ನುವವರು ಕೋಳಿ ಖರೀದಿಸಲು ಹೊಸೂರಿಗೆ ತೆರಳುತ್ತಿದ್ದರು. ದೊಡ್ಡಬಳ್ಳಾಪುರ ತಾಲೂಕಿನ ಅರಳು ಮಲ್ಲಿಗೆ ಸಮೀಪ ದ್ವಿಚಕ್ರ ವಾಹನವೊಂದರಲ್ಲಿ ಬಂದ ಮುಸುಕುಧಾರಿಗಳಿಬ್ಬರು ವಾಹನಕ್ಕೆ ಡಿಕ್ಕಿ ಹೊಡೆದು ಜಗಳಕ್ಕಿಳಿದಿದ್ದಾರೆ. ಇದೇ ಸಮಯದಲ್ಲಿ ಮತ್ತೆರಡು ದ್ವಿಚಕ್ರ ವಾಹನದಲ್ಲಿ ಬಂದ ಮತ್ತೆ ನಾಲ್ವರು ವಾಹನದಲ್ಲಿಡಲಾಗಿದ್ದ ಹಣ ದೋಚಿದ್ದಾರೆ.
ಘಟನೆ ತಡೆಯಲು ಮುಂದಾದ ಕಾರ್ಮಿಕರಿಗೆ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮೂರು ಬೈಕ್ ಹಾಗೂ 2 ಲಕ್ಷ ನಗದು ವಶಪಡಿಸಿಕೊಂದ್ದು, ಉಳಿದ ಆರೋಪಿಗಳ ಪತ್ತೆಗೆ ಶೋಧ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಕಂಬಳ: 140 ರಿಂದ 150 ಜೊತೆ ಕೋಣಗಳು ಭಾಗಿ, ವಿದೇಶಿಗರು ಫಿದಾ