ದೊಡ್ಡಬಳ್ಳಾಪುರ : ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಕೋಡಿ ಬಿದ್ದ ಮೊದಲ ಕೆರೆ ಎಂಬ ಹೆಗ್ಗಳಿಕೆಗೆ ಗುಂಡಮಗೆರೆ ಕೆರೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಪತ್ನಿ ಸಮೇತರಾಗಿ ಆಗಮಿಸಿದ ಶಾಸಕರು ಬಾಗಿನ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಶಾಸಕರು, ಕೆರೆಯಿಂದ ನೀರು ವ್ಯರ್ಥವಾಗಿ ಹರಿದು ಆಂಧ್ರ ಪ್ರದೇಶಕ್ಕೆ ಸೇರುತ್ತಿತ್ತು. ಕೆರೆಯ ನೀರನ್ನು ತಾಲೂಕಿನ ಜನತೆ ಬಳಸಿಕೊಳ್ಳುವ ಕಾರಣಕ್ಕೆ ಸಾಸಲು ಹೋಬಳಿಯ ಗೌರಮ್ಮನಕೆರೆ, ಹೊಸಹಳ್ಳಿ ಕೆರೆಗೆ ನೀರು ಹರಿಯುವಂತೆ ಮಾಡಲಾಗಿದೆ. ಕೆರೆಗಳು ತುಂಬುವುದರಿಂದ ತಾಲೂಕಿನ ಅಂತರ್ಜಲ ವೃದ್ಧಿಯಾಗಲಿದೆ ಎಂದರು
ಮಾಕಳಿದುರ್ಗದ ತಪ್ಪಲಲ್ಲಿರುವ ಗುಂಡಮಗೆರೆ ಕೆರೆ ಕೋಡಿ ಬೀಳುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಬೆಟ್ಟಗಳ ಸಾಲಿನ ಮಧ್ಯೆ ಮಾಕಳಿದುರ್ಗದ ತಪ್ಪಲಲ್ಲಿ ಮೈದುಂಬಿ ಹರಿಯುತ್ತಿದ್ದಾಳೆ ಗಂಗಾಮಾತೆ. ಕೋಡಿಯ ಮೇಲೆ ಧುಮ್ಮಿಕ್ಕುತ್ತಿರುವ ಜಲಧಾರೆಯ ಸೌಂದರ್ಯ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪದಿಯಾಗಿ ಭೇಟಿ ಕೊಡುತ್ತಿದ್ದಾರೆ. ಕುಟುಂಬದ ಜೊತೆ ಬಂದಿರುವ ಮಕ್ಕಳು ನೀರಾಟದಲ್ಲಿ ಖುಷಿ ಪಡುತ್ತಿದ್ದಾರೆ. ಊರಿನ ಹಿರಿಯರು ಹಿಂದಿನ ಕೆರೆಯ ವೈಭವವನ್ನು ಮೆಲುಕು ಹಾಕುತ್ತಿದ್ದಾರೆ. ಒಟ್ಟಾರೆ ಗುಂಡಮಗೆರೆ ಕೆರೆ ಕೋಡಿ ಬಿದ್ದಿರುವುದು ಹತ್ತಾರು ಗ್ರಾಮಗಳ ಖುಷಿಗೆ ಕಾರಣವಾಗಿದೆ.
ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಇದರ ಜೊತೆಗೆ ಒಂದೊಂದಾಗಿ ಕೆರೆಗಳು ಕೋಡಿ ಬೀಳುತ್ತಿರುವುದರಿಂದ ಬೇಸಿಗೆಯಲ್ಲಿ ಭತ್ತ ಬೆಳೆಯುವ ಆಸೆ ಮೂಡಿಸಿದ್ದಾನೆ ಮಳೆರಾಯ.