ದೊಡ್ಡಬಳ್ಳಾಪುರ: ಸೆಪ್ಟೆಂಬರ್ 3 ರಂದು ದೊಡ್ಡಬಳ್ಳಾಪುರ ನಗರಸಭೆಗೆ ನಡೆದ ಚುನಾವಣೆಯಲ್ಲಿ ಇಂದು ಫಲಿತಾಂಶ ಪ್ರಕಟವಾಗಿದ್ದು, ಯಾವುದೇ ಪಕ್ಷಕ್ಕೆ ಬಹುಮತ ಸಿಗದೇ ಅತಂತ್ರವಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಬಹುತೇಕ ಖಚಿತವಾಗಿದೆ.
7 ವರ್ಷಗಳ ನಂತರ ದೊಡ್ಡಬಳ್ಳಾಪುರ ನಗರಸಭೆಗೆ ಚುನಾವಣೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಿದೆ. 31 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನ, ಕಾಂಗ್ರೆಸ್ 9, ಜೆಡಿಎಸ್ 7 ಮತ್ತು ಪಕ್ಷೇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಬಿಜೆಪಿ 12 ಸ್ಥಾನ ಪಡೆದರೂ ಅಧಿಕಾರ ಹಿಡಿಯುವುದು ಕಷ್ಟ!
ಮ್ಯಾಜಿಕ್ ನಂಬರ್ 16 ಆಗಿದ್ದು ಯಾವ ಪಕ್ಷ ಸಹ ಬಹುಮತ ಪಡೆದಿಲ್ಲ. ಬಿಜೆಪಿ 12 ಸ್ಥಾನ ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿದ್ದರು, ಅಧಿಕಾರ ಪಡೆಯಲು ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ದೊಡ್ಡಬಳ್ಳಾಪುರ ನಗರಸಭೆಯ ಅಧಿಕಾರ ಹಿಡಿಯಲು ಬಿಜೆಪಿ ಮುಖಂಡರಿಂದ ಪ್ರಯತ್ನ ಪ್ರಾರಂಭವಾಗಿದ್ದು, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ದೊಡ್ಡಬಳ್ಳಾಪುರ ನಗರಕ್ಕೆ ಆಗಮಿಸಿದ್ದು, ನಗರಸಭೆ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗೆದ್ದಿರುವ ಪಕ್ಷೇತರರು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿದ್ದು, ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ. ಅಧಿಕಾರ ಹಿಡಿಯಲು ಜೆಡಿಎಸ್ ಪಕ್ಷದ ಮುಖಂಡರನ್ನ ಸಂಪರ್ಕಿಸಲಾಗುವುದು ಜೆಡಿಎಸ್ ಪಕ್ಷದವರು ಬೆಂಬಲ ಸೂಚಿಸುವ ವಿಶ್ವಾಸ ಇದೇ ಎಂದರು.
ಜೆಡಿಎಸ್ ಪಕ್ಷವೇ ಇಲ್ಲಿ ನಿರ್ಣಾಯಕ
ನಗರಸಭೆ ಅಧಿಕಾರ ಹಿಡಿಯಲು ಜೆಡಿಎಸ್ ಪಕ್ಷ ನಿರ್ಣಯಕವಾಗಿದ್ದು, ಜೆಡಿಎಸ್ ಪಕ್ಷ ಯಾರಿಗೆ ಬೆಂಬಲ ಸೂಚಿಸುತ್ತೋ ಆ ಪಕ್ಷ ಅಧಿಕಾರ ಹಿಡಿಯಲಿದೆ. ನಗರಸಭೆ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಬಿ.ಮುನೇಗೌಡ, ಜೆಡಿಎಸ್ ವರಿಷ್ಠರಾದ ಕುಮಾರಸ್ವಾಮಿ ಮತ್ತು ದೇವೇಗೌಡರೊಂದಿಗೆ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಎರಡು ಪಕ್ಷಗಳಿಂದ ಮುನೇಗೌಡರಿಗೆ ಫೋನ್ ಕರೆ ಮಾಡಿ ಬೆಂಬಲ ನೀಡುವಂತೆ ಕೇಳಿದ್ದಾರೆ. ಕಂದಾಯ ಸಚಿವರಾದ ಆರ್. ಅಶೋಕ್ ಮುನೇಗೌಡರಿಗೆ ಪೋನ್ ಮಾಡಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಪಕ್ಷ ಅಧ್ಯಕ್ಷ ಸ್ಥಾನದ ಷರತ್ತಿನೊಂದಿಗೆ ಬೆಂಬಲ ಸೂಚಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಇದನ್ನೂ ಓದಿ : ಬೆಳಗಾವಿಯಲ್ಲಿ MES ಗೆ ತೀವ್ರ ಮುಖಭಂಗ.. ಬಿಜೆಪಿ ತೆಕ್ಕೆಗೆ ಕುಂದಾನಗರಿ