ದೇವನಹಳ್ಳಿ (ಬೆಂ.ಗ್ರಾಮಾಂತರ ಜಿಲ್ಲೆ) : ಕೋವಿಡ್ ಲಸಿಕೆ ಶೀಘ್ರದಲ್ಲಿ ಲಭ್ಯವಾಗಲಿದ್ದು, ಹಂತ ಹಂತವಾಗಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಮೊದಲ ಆದ್ಯತೆಯಾಗಿ ವೈದ್ಯರು ಹಾಗೂ ಗ್ರಾಮೀಣ ಭಾಗದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆ ಪರಿಚಯ ಕುರಿತಂತೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ವನ್ನು ಉದ್ಘಾಟಿಸಿ ಡಿಸಿ ಮಾತನಾಡಿದರು.
ಲಸಿಕೆ ನೀಡಲು ಬೇಕಾದ ಎಲ್ಲಾ ಅಗತ್ಯ ಸಿದ್ಧತೆ ನಡೆಯುತ್ತಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈಗಳನ್ನು ಸಾಬೂನಿನಿಂದ ತೊಳೆಯುವುದು, ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಇನ್ನಿತರ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಹೇಳಿದರು. ಡಬ್ಲ್ಯೂಎಚ್ ಪ್ರತಿನಿಧಿಯಾದ ಸರ್ವೇಲೇನ್ಸ್ ಮೆಡಿಕಲ್ ಅಧಿಕಾರಿಯಾದ ನಾಗರಾಜು ಮಾತನಾಡಿ, ನ್ಯಾಷನಲ್ ಎಕ್ಸ್‌ಫರ್ಟ್ ಗ್ರೂಪ್ ಆನ್ ವ್ಯಾಕ್ಸಿನ್ ಅಡ್ಮಿನಿಸ್ಟ್ರೇಶನ್(NEGVAC) ಮಾರ್ಗದರ್ಶನದ ಅಡಿಯಲ್ಲಿ ನಾವು ಕೋವಿಡ್ ಲಸಿಕೆಯನ್ನು ನೀಡಬೇಕಾಗುತ್ತದೆ. ಮೊದಲ ಆದ್ಯತೆ ವೈದ್ಯರಿಗೆ, ನಂತರದಲ್ಲಿ ಪೊಲೀಸ್ ಇಲಾಖೆ, ಆಮ್ರ್ಡ್ ಪೋರ್ಸ್ , ಹೋಮ್‍ಗಾರ್ಡ್ಸ್, ಮುನ್ಸಿಪಾಲ್ ವರ್ಕರ್ಸ್, 50 ಮೇಲ್ಪಟ್ಟವರಿಗೆ ನೀಡಬೇಕೆಂದು ನೇಗ್‍ವ್ಯಾಕ್( NEGVAC ) ಸೂಚಿಸಿದೆ ಎಂದು ಮಾಹಿತಿ ನೀಡಿದರು.
ಲಸಿಕೆ ನೀಡಲು ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯಾ ಊರಿನ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು, ಮುನ್ಸಿಪಾಲಿಟಿ, ಸಮುದಾಯ ಭವನಗಳನ್ನು ಆಯ್ಕೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ನೀಡಬೇಕು. ಆಯ್ಕೆ ಮಾಡಿಕೊಂಡಿರುವ ಸ್ಥಳಗಳಲ್ಲಿ ಮೂರು ಕೊಠಡಿಗಳಿರಬೇಕು. ಮೊದಲನೇ ಕೊಠಡಿಯಲ್ಲಿ ಲಸಿಕೆ ಪಡೆಯುವವರು ಕುಳಿತುಕೊಳ್ಳಲು ವ್ಯವಸ್ಥೆ, ಎರಡನೇ ಕೊಠಡಿ ವ್ಯಾಕ್ಸಿನೇಷನ್ ಕೊಠಡಿಯಾಗಿದ್ದು, ಲಸಿಕೆ ನೀಡಲು ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು. ಮೂರನೇ ಕೊಠಡಿ ವೀಕ್ಷಣಾ ಕೊಠಡಿಯಾಗಿದ್ದು, ಲಸಿಕೆ ಪಡೆದುಕೊಂಡವರು ಕನಿಷ್ಟ 30 ನಿಮಿಷಗಳ ಕಾಲ ವಿಶ್ರಾಂತಿ ಪಡೆದು ಹೋಗಲು ಅವಕಾಶ ಕಲ್ಪಿಸಿರಬೇಕು ಎಂದು ಹೇಳಿದರು.