ಬೆಂಗಳೂರು: ರಾಜ್ಯಾದ್ಯಂತ 2016ರಿಂದ ಪ್ಲಾಸ್ಟಿಕ್ ನಿಷೇಧವಾದ್ರು ಎಗ್ಗಿಲ್ಲದೆ ಬಳಕೆ ಮಾಡುತ್ತಿರುವ ಅಂಗಡಿ, ಹೋಟೆಲ್ಗಳ ಮೇಲೆ ಬೊಮ್ಮನಹಳ್ಳಿ ಬಿಬಿಎಂಪಿ ಕಮಿಷನರ್ ಹಾಗೂ ಶಾಸಕ ಸತೀಶ್ ರೆಡ್ಡಿ ದಾಳಿ ನಡೆಸಿದ್ದಾರೆ.
ಅಂಗಡಿ ಮುಂಗಟ್ಟುಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಕೈ ಚೀಲಗಳನ್ನು ಬಳಸುತ್ತಿರುವ ಖಚಿತ ಮಾಹಿತಿ ಮೇರೆಗೆ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಯಿತು. ಅಂಗಡಿ, ಹೋಟೆಲ್ ಸೇರಿದಂತೆ ಪಿಜಿಗಳಲ್ಲಿ ಕಾನೂನು ಬಾಹಿರವಾಗಿ ಬಳಸುತ್ತಿದ್ದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಕವರ್ಗಳನ್ನು ವಶಕ್ಕೆ ಪಡೆದು, ನಿಷೇಧ ಹೇರಲಾಗಿರುವ ಪ್ಲಾಸ್ಟಿಕ್ ಬಳಸಬಾರದೆಂದು ಎಚ್ಚರಿಕೆ ನೀಡಲಾಯಿತು. ಅಲ್ಲದೆ ಪೇಪರ್ ಕವರ್ಗಳನ್ನು ನೀಡಲಾಯ್ತು. ಇನ್ನು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿರುವ ಪಿಜಿಗಳ ಮೇಲೆ ದಾಳಿ ನಡೆಸಿದಾಗ ಪಿಜಿಯಲ್ಲಿ ಕೊಳೆತ ತರಕಾರಿ ಮತ್ತು ಆಹಾರಗಳು ಸೇರಿದಂತೆ ಪ್ಲಾಸ್ಟಿಕ್ ಬಳಕೆ ಕಂಡು ಅಧಿಕಾರಿಗಳು ಗರಂ ಆಗಿ ದಂಡ ವಿಧಿಸುವ ಎಚ್ಚರಿಕೆ ನೀಡಿದರು.
ಬೇಗೂರು ಮುಖ್ಯ ರಸ್ತೆ, ಮಂಗಮ್ಮನ ಪಾಳ್ಯ ಮುಖ್ಯ ರಸ್ತೆ ಹೀಗೆ ಎಲ್ಲೆಡೆ ಪ್ಲಾಸ್ಟಿಕ್ ಬಳಸುತ್ತಿರುವ ಶಾಪ್ಗಳನ್ನು ರೇಡ್ ಮಾಡಿದ ಅಧಿಕಾರಿಗಳು, ಈಗಾಗಲೇ ಸರ್ಕಾರ 40 ಮೈಕ್ರಾನ್ಗಿಂತಲೂ ಕಡಿಮೆ ಇರುವ ಪ್ಲಾಸ್ಟಿಕ್ ಬಳಸಿದರೆ ಪರಿಸರ ಸಂಪೂರ್ಣ ಹಾಳಾಗುತ್ತದೆ. ಹಾಗಾಗಿ ಅಂತಹ ಪ್ಲಾಸ್ಟಿಕ್ ಬಳಸದಂತೆ ಅಂಗಡಿ ಮಾಲೀಕರಿಗೆ ಸೂಚಿಸಿದರು. ಇದನ್ನು ಮೀರಿ ಯಾರಾದ್ರು ಬಳಸಿದಲ್ಲಿ ಅವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿದರು.