ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಚರ್ಮಗಂಟು ರೋಗವು ಪೂರ್ತಿಯಾಗಿ ಹತೋಟಿಗೆ ಬಾರದ ಹಿನ್ನೆಲೆ ಜಾನುವಾರುಗಳ ಜಾತ್ರೆ, ಸಂತೆ, ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಬಂಧ ಮುಂದುವರೆಸಲಾಗಿದೆ ಜಿಲ್ಲಾಧಿಕಾರಿ ಆರ್.ಲತಾ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ The Prevention and control of infectious and Contagious Diseases in Animals Act-2009 Section-12 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಾನುವಾರುಗಳಿಗೆ ಚರ್ಮಗಂಟು ರೋಗ (Lumpy Skin Disease) ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ 2023ರ ಫೆಬ್ರವರಿ 28 ರ ಸಂಜೆ 6.00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಜಾನುವಾರುಗಳ ಜಾತ್ರೆ, ಸಂತೆ, ಸಾಗಾಣಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಈವರೆಗೂ 2370 ಜಾನುವಾರುಗಳಲ್ಲಿ ಈ ರೋಗವು ಕಂಡುಬಂದಿದೆ. 206 ಜಾನುವಾರುಗಳು ಈ ರೋಗದಿಂದ ಈಗಾಗಲೇ ಮರಣಹೊಂದಿರುತ್ತವೆ. ಇದು ಒಂದು ವೈರಾಣುನಿಂದ ಹರಡುವ ರೋಗವಾಗಿದ್ದು ಹಾಗೂ ಪ್ರಮುಖವಾಗಿ ಸೊಳ್ಳೆ, ನೊಣ, ಉಣ್ಣೆ ಇತ್ಯಾದಿ ಕೀಟಗಳಿಂದ ಹರಡುತ್ತದೆ. ಈ ರೋಗವು ಕಾಣಿಸಿಕೊಂಡ ಜಾನುವಾರುಗಳು ರೋಗದಿಂದ ಸಾಕಷ್ಟು ಬಳಲುವುದರಿಂದ ಉತ್ಪಾದನೆ ಕಡಿಮೆಯಾಗುವುದಲ್ಲದೆ, ಕೆಲವೊಮ್ಮೆ ಮರಣ ಹೊಂದುತ್ತವೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 1,60,087 ಜಾನುವಾರುಗಳಿಗೆ ಲಸಿಕೆಯನ್ನು ನೀಡಲಾಗಿದ್ದು, ರೋಗ ಪೀಡಿತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ ಎಂದು ಅವರು ಆದೇಶ ಪ್ರತಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಜಿಲ್ಲೆಯಲ್ಲಿ ಹಲವೆಡೆ ಜಾನುವಾರು ಸಂತೆ/ಜಾತ್ರೆಗಳು ನಡೆಯಲಿದ್ದು, ಇವುಗಳಿಂದ ಜಾನುವಾರುಗಳ ಸಾಗಾಣಿಕೆ/ಚಲನವಲನದಿಂದ ಹಾಗೂ ಹಲವಾರು ಜಾನುವಾರುಗಳನ್ನು ಒಂದೆಡೆ ಸೇರಿಸುವುದರಿಂದ ರೋಗೋದ್ರೇಕವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ 1,62,980 ದನ/ಎಮ್ಮೆಗಳಿದ್ದು, ರೋಗೋದ್ರೇಕವನ್ನು ನಿಯಂತ್ರಿಸದಿದ್ದಲ್ಲಿ ಸಾಕಷ್ಟು ಆರ್ಥಿಕ ನಷ್ಟ ಉಂಟಾಗುವ ಸಂಭವವಿರುವುದರಿಂದ ಜಿಲ್ಲೆಯಾದ್ಯಂತ ಜಾನುವಾರು ಜಾತ್ರೆ/ಸಂತೆಗಳನ್ನು ಎರಡು ತಿಂಗಳ ಅವಧಿಗೆ Karnataka Animal Diseases (Control Act), 1961 ರಡಿ ಮತ್ತು ಸಿಆರ್‌ಪಿಸಿ ಕಲಂ 144 ರ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ಮಾಡುವುದನ್ನು ನಿಷೇಧಿಸುವಂತೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಜಾನುವಾರುಗಳಿಗೆ ಹರಡುತ್ತಿರುವ ರೋಗದ ನಿಯಂತ್ರಣಕ್ಕಾಗಿ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಚರ್ಮಗಂಟು ರೋಗವನ್ನು ನಿಯಂತ್ರಣ ಮಾಡಲು ಕರ್ನಾಟಕ ಪ್ರಾಣಿಗಳ ಕಾಯಿಲೆ 1961ರ ಕಾಯ್ದೆ ಪ್ರಕಾರ, 2023ರ ಜನವರಿ 30ರವರೆಗೂ ಜಿಲ್ಲೆಯಲ್ಲಿ ಜಾನುವಾರುಗಳ ಜಾತ್ರೆ ಮತ್ತು ಸಾಗಾಣಿಕೆ ಮಾಡದಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದರು. ಆದರೆ, ಜಿಲ್ಲಾಡಳಿತದ ನಿಷೇಧದ ನಡುವೆಯು ಘಾಟಿ ದನಗಳ ಜಾತ್ರೆ ನಡೆಸಲಾಗಿತ್ತು. ಅಲ್ಲದೇ ಸ್ವಯಂಪ್ರೇರಿತರಾಗಿ ರೈತರು ದನಗಳ ವ್ಯಾಪಾರಕ್ಕೆ ಘಾಟಿಗೆ ಬಂದಿದ್ದರು. ಇದೀಗ ಮತ್ತೆ ಒಂದು ತಿಂಗಳುಗಳ ಕಾಲ ಸಂಪೂರ್ಣವಾಗಿ ನಿರ್ಬಂಧ ಮುಂದುವರೆಸಲಾಗಿದೆ.
ಇದನ್ನೂ ಓದಿ: ಫೆಬ್ರವರಿ 3ನೇ ವಾರದಲ್ಲಿ ಆನೆಗೊಂದಿ ಉತ್ಸವ, ಕೇಂದ್ರ ಗೃಹಸಚಿವ ಅಮಿತ ಶಾ ಚಾಲನೆ : ಶಾಸಕ ಪರಣ್ಣ ಮುನವಳ್ಳಿ