ದೇವನಹಳ್ಳಿ(ಬೆಂಗಳೂರು): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರ್ನಿಂದ ಇಂಡಿಗೋ 6E6744 ವಿಮಾನದಲ್ಲಿ ಬಂದಿದ್ದ ಚೆನ್ನೈ ಮೂಲದ ವ್ಯಕ್ತಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ ಬರೋಬ್ಬರಿ 4 ಕೋಟಿ ರೂ. ಮೌಲ್ಯದ 6.5 ಕೆಜಿ ತೂಕದ 7 ಚಿನ್ನದ ಬಿಸ್ಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು, ಸ್ಮಗ್ಲರ್ಸ್ ಮೊದಲೇ ಸೀಟ್ ಕೆಳಗಡೆ ಚಿನ್ನವನ್ನಿಟ್ಟು ಬಂಧಿತ ಆರೋಪಿಗೆ ತಿಳಿಸಿದ್ದರು. ಹೀಗಾಗಿ ಬಂಧಿತ ಆರೋಪಿ ಅದೇ ಸೀಟ್ ಬುಕ್ ಮಾಡಿಕೊಂಡು ಬೆಂಗಳೂರಿಗೆ ಬರುತ್ತಿದ್ದಂತೆ ಆತ ಸೀಟ್ ಕೆಳಗೆ ಇಟ್ಟಿದ್ದ ಚಿನ್ನವನ್ನು ಬ್ಯಾಗ್ನಲ್ಲಿ ಹಾಕಿಕೊಂಡು ವಿಮಾನ ಇಳಿದು ಬಂದಿದ್ದಾನೆ. ಆದ್ರೆ, ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಕೋಟ್ಯಂತರ ಮೌಲ್ಯದ ಚಿನ್ನ ಪತ್ತೆಯಾಗಿದೆ.
ದೇಶಿಯ ಪ್ರಯಾಣಿಕರನ್ನು ಚೆಕ್ ಮಾಡಲ್ಲ, ಸುಲಭವಾಗಿ ಚಿನ್ನ ಸಾಗಿಸಬಹುದು ಎಂದು ಪ್ಲಾನ್ ಮಾಡಿದ್ದ. ಆದ್ರೆ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ವೇಳೆ ಅಧಿಕಾರಿಗಳ ಕೈಗೆ ತಗ್ಲಾಕಿಕೊಂಡಿದ್ದಾನೆ. ಇದೀಗ ಕಸ್ಟಮ್ಸ್ ಅಧಿಕಾರಿಗಳು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಮಾನದ ಸೀಟ್ ಕೆಳಗಡೆ ಚಿನ್ನವಿಟ್ಟವರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಎಐ ಬಳಸಿ ವ್ಯಕ್ತಿಗೆ ವಂಚನೆ.. ಸೈಬರ್ ಬ್ರ್ಯಾಂಚ್ನಿಂದ ಹಣ ಮರಳಿ ಪಡೆದ ವ್ಯಕ್ತಿ!
ಮಂಗಳೂರು ಏರ್ಪೋರ್ಟ್ನಲ್ಲಿ 90 ಲಕ್ಷ ರೂ. ಮೌಲ್ಯದ ಚಿನ್ನ ವಶ: ಈ ವರ್ಷ ಮಾರ್ಚ್ನಲ್ಲಿ ದುಬೈನಿಂದ ಬಂದಿಳಿದ ಪ್ರಯಾಣಿಕರು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಲು ಯತ್ನಿಸಲಾಗುತ್ತಿದ್ದ ಸುಮಾರು 90 ಲಕ್ಷ ರೂ.ಮೌಲ್ಯದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. 2023ರ ಮಾರ್ಚ್ 1 ರಿಂದ 15 ರ ಅವಧಿಯಲ್ಲಿ ದುಬೈನಿಂದ ಬಂದ ಒಂದು ಹೆಣ್ಣು ಮಗು ಸೇರಿದಂತೆ ಮೂವರು ಪ್ರಯಾಣಿಕರಿಂದ 90,67,750 ರೂಪಾಯಿ ಮೌಲ್ಯದ 1,606 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಓರ್ವ ಪುರುಷ ಪ್ರಯಾಣಿಕ ತಾನು ಧರಿಸಿದ್ದ ಪ್ಯಾಂಟ್‌ನ ಸೊಂಟದ ಬ್ಯಾಂಡ್‌ನಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆ ಮಾಡಿದ್ದ.
ಇನ್ನು ಇತರ ಇಬ್ಬರು ಪ್ರಯಾಣಿಕರಲ್ಲಿ 21 ತಿಂಗಳ ಮಗುವಿನ ಡೈಪರ್ನಲ್ಲಿ ಸಹ ಚಿನ್ನ ಅಡಗಿಸಿಡಲಾಗಿತ್ತು. ಮಗುವಿನ ತಂದೆ ತನ್ನ ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದನು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದರು.
ಏರ್ ಇಂಡಿಯಾ ಎಕ್ಸ್ಪ್ರೆಸ್ ಉದ್ಯೋಗಿ ಸೆರೆ: ಇನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಉದ್ಯೋಗಿಯೊಬ್ಬರು ಒಂದೂವರೆ ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಸಹ ಕಸ್ಟಮ್ ಅಧಿಕಾರಿಗಳ ಕೈಗೆ ಇತ್ತೀಚೆಗೆ ಸಿಕ್ಕಿ ಬಿದ್ದಿದ್ದರು. ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 8 ರಂದು ಘಟನೆ ನಡೆದಿತ್ತು. ವಿಮಾನದ ಕ್ಯಾಬಿನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಫಿ ಎಂಬಾತ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂಬ ರಹಸ್ಯ ಕಸ್ಟಮ್ಸ್ ಅಧಿಕಾರಿಗಳಿಗೆ ಲಭಿಸಿತ್ತು.