ದೇವನಹಳ್ಳಿ (ಬೆಂ.ಗ್ರಾಮಾಂತರ): ಪೋಷಕರ ಮೇಲಿನ ದ್ವೇಷಕ್ಕೆ ಬಾಲಕಿಯರಿಗೆ ವಿಷಪ್ರಾಶನ ಮಾಡಿದ ಪ್ರಕರಣ ಸಂಬಂಧ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಮಕ್ಕಳು ಚಿಕಿತ್ಸೆ ಪಡೆಯುತ್ತಿರುವ ದೇವನಹಳ್ಳಿ ಮಾನಸ ಆಸ್ಪತ್ರೆಗೆ ಭೇಟಿ ನೀಡಿದ ಅವರು ಪೋಷಕರಿಂದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ಶಿವಶಂಕರ್ ಮಾತನಾಡಿ, "ನಿಜಕ್ಕೂ ಇದೊಂದು ಅಮಾನವೀಯ ಘಟನೆ. ಯಾರೋ ದ್ವೇಷಕ್ಕೆ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈಗಾಗಲೇ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರನ್ನು ಆದಷ್ಟು ಬೇಗ ಪೊಲೀಸರು ಬಂಧಿಸುತ್ತಾರೆ. ಕೆಲವೇ ದಿನಗಳಲ್ಲಿ ವಿಷಪ್ರಾಶನದ ಸತ್ಯ ಹೊರಬರಲಿದೆ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಸರ್ಕಾರದಿಂದ ಪರಿಹಾರ ಕೊಡುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ" ಎಂದರು.
ಏನಿದು ಪ್ರಕರಣ?: ಮನೆಗೆ ಬಂದ ದುಷ್ಕರ್ಮಿಗಳಿಬ್ಬರು ಬಾಲಕಿಯರಿಗೆ ಒತ್ತಾಯಪೂರ್ವಕವಾಗಿ ವಿಷಪ್ರಾಶನ ಮಾಡಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ಘಟನೆ ನಡೆದಿತ್ತು. ವಿಷ ಸೇವನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇಬ್ಬರು ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದೊಡ್ಡಸಣ್ಣೆ ಗ್ರಾಮದ ಅಶೋಕ್ ಮತ್ತು ಶಿಲ್ಪಾ ದಂಪತಿಯ ಪುತ್ರಿಗೆ ದುಷ್ಕರ್ಮಿಗಳು ವಿಷಪ್ರಾಶನ ಮಾಡಿದ್ದರು. ಬುಧವಾರ ಬೆಳಗ್ಗೆ ದಂಪತಿ ಹೂ ಕೀಳಲು ಜಮೀನಿಗೆ ತೆರಳಿದ್ದರು. ಜಮೀನಿಗೆ ಹೋದ ಬಳಿಕ ಮನೆಗೆ ನುಗ್ಗಿದ ಕಿಡಿಗೇಡಿಗಳು ಮನೆಯಲ್ಲಿದ್ದ ಬಾಲಕಿಯನ್ನು ಹೆದರಿಸಿ ವಿಷ ಕುಡಿಸಿ ಪರಾರಿಯಾಗಿದ್ದರು. ಬಳಿಕ ಪೋಷಕರು ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಈ ಘಟನೆಯ ಬೆನ್ನಲ್ಲೇ ಗುರುವಾರ ಬೆಳಗ್ಗೆ ಮತ್ತೆ ಬಂದ ಕಿಡಿಗೇಡಿಗಳು ಪಕ್ಕದ ಮನೆಯ ಇದೇ ಬಾಲಕಿಯ ಚಿಕ್ಕಪ್ಪನ ಮಗಳಿಗೂ ಇದೇ ರೀತಿ ಹೆದರಿಸಿ ವಿಷಪ್ರಾಶನ ಮಾಡಿಸಿದ್ದರು. ಇದಕ್ಕೆ ಬಾಲಕಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಚಾಕುವಿನಿಂದ ಕೈಗೆ ಹಲ್ಲೆ ಮಾಡಿದ್ದರು. ವಿಷ ಕುಡಿಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ಕುಡಿಸಿದ್ದರು. ದುಷ್ಕರ್ಮಿಗಳು ಪರಾರಿಯಾಗುತ್ತಿದ್ದಂತೆ ಬಾಲಕಿ ಮನೆಯಿಂದ ಹೊರ ಬಂದು ಕಿರುಚಾಡಿದ್ದಾಳೆ. ತಕ್ಷಣ ಸ್ಥಳಕ್ಕಾಗಮಿಸಿದ ನೆರೆಹೊರೆಯವರು ಬಾಲಕಿಯನ್ನು ದೇವನಹಳ್ಳಿಯ ಖಾಸಗಿ ಆಸ್ವತ್ರೆಗೆ ದಾಖಲಿಸಿದ್ದರು.