ದೊಡ್ಡಬಳ್ಳಾಪುರ : ಮಾರುಕಟ್ಟೆಗಳಲ್ಲಿ ಟೊಮೆಟೊಗೆ ಭಾರಿ ಬೇಡಿಕೆ ಬಂದಿದೆ. ಬೆಲೆ ಹೆಚ್ಚಳವಾದ ದೆಸೆಯಿಂದ ಕಳ್ಳರ ಕೆಂಗಣ್ಣು ಟೊಮೆಟೊ ತೋಟಗಳ ಮೇಲೆ ಬಿದ್ದಿದೆ. ಹೀಗಾಗಿ, ಹಗಲು-ರಾತ್ರಿ, ಗಾಳಿ-ಮಳೆ ಲೆಕ್ಕಿಸದೆ ದಂಪತಿ ಕೈಯಲ್ಲಿ ದೊಣ್ಣೆ ಹಿಡಿದು ತಮ್ಮ ತೋಟ ಕಾಯುತ್ತಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ಕಂಡುಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಲಕ್ಷ್ಮೀದೇವಿಪುರ ಗ್ರಾಮದ ಜಗದೀಶ್ ಮತ್ತು ಶಶಿಕಲಾ ದಂಪತಿಯ ತೋಟದಲ್ಲಿ ಕಳೆದ ಎರಡು ಬಾರಿ ಟೊಮೆಟೊ ಕಳ್ಳತನ ನಡೆದಿದೆ. ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ತರಕಾರಿ ಕಳ್ಳರ ಪಾಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ, ಕಳ್ಳಕಾಕರ ಭಯದಿಂದ ಮುನ್ನೆಚ್ಚರಿಕೆ ಕ್ರಮವಾಗಿ ದಂಪತಿ ಕೈಯಲ್ಲಿ ದೊಣ್ಣೆ ಹಿಡಿದು ತೋಟವನ್ನು ಕಾಯುತ್ತಿದ್ದಾರೆ.
ಜಗದೀಶ್ ಅವರು 3 ಲಕ್ಷ ರೂ ವೆಚ್ಚ ಮಾಡಿ 1 ಎಕರೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ ಬೆಲೆ ಸದ್ಯ 100 ರೂಪಾಯಿ ಗಡಿ ದಾಟಿದ್ದು, ಉತ್ತಮ ಫಸಲು ಬಂದ ಕಾರಣಕ್ಕೆ ದಂಪತಿ ಖುಷಿಯಾಗಿದ್ದರು. ಆದರೆ, ಶನಿವಾರ ಹಾಗೂ ಭಾನುವಾರ ಕಳ್ಳರು ರಾತ್ರೋರಾತ್ರಿ 1.50 ಲಕ್ಷ ರೂ ಮೌಲ್ಯದ 80 ಬಾಕ್ಸ್ ಟೊಮೆಟೊ ಕದ್ದು ಪರಾರಿಯಾಗಿದ್ದಾರೆ.
ಜಗದೀಶ್ ಇತ್ತೀಚೆಗಷ್ಟೇ ಹೊಸ ಕೊಳವೆಬಾವಿ ಕೊರೆಸಿದ್ದರು. ನೀರು ಸಿಗದ ಕಾರಣ ಮತ್ತೊಂದು ಕೊಳವೆಬಾವಿ ಕೊರೆಸಿ ಬೆಳೆ ಬೆಳೆಯಲು ಆರಂಭಿಸಿದ್ದರು. ಇದಕ್ಕೆಲ್ಲ ಒಟ್ಟು 12 ಲಕ್ಷ ರೂ ಸಾಲ ಮಾಡಿದ್ದರಂತೆ. ಟೊಮೆಟೊ ಬೆಳೆಗೆ ಉತ್ತಮವಾದ ಬೆಲೆ ಬಂದ ಹಿನ್ನೆಲೆಯಲ್ಲಿ ಸಾಲ ತೀರಿಸಿ ಲಾಭದ ನಿರೀಕ್ಷೆಯಲ್ಲಿ ಕುಟುಂಬವಿತ್ತು. ಆದರೆ, ರೈತಾಪಿ ಕುಟುಂಬದ ಆಸೆಗೆ ಕಳ್ಳರು ತಣ್ಣೀರೆರಚುತ್ತಿದ್ದಾರೆ.
ಕೂಲಿಯಾಳುಗಳ ಸಮಸ್ಯೆ ಮಧ್ಯೆಯೂ ಜಗದೀಶ್ ಹಾಗೂ ಅವರ ಪತ್ನಿ ಶಶಿಕಲಾ ಇಬ್ಬರೇ ಬೆಳೆ ನಿರ್ವಹಣೆ ಮಾಡುತ್ತಿದ್ದರು. ಗ್ರಾಮದಿಂದ ಒಂದೂವರೆ ಕಿ.ಮೀ ದೂರದ ನಿರ್ಜನ ಪ್ರದೇಶದಲ್ಲಿ ತೋಟವಿದ್ದ ಕಾರಣ ರಾತ್ರಿ ವೇಳೆ ತಂಗುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಹೊಂಚು ಹಾಕಿದ ಕಳ್ಳರು, ಶನಿವಾರ ರಾತ್ರಿ (ಜು. 8) ಸುಮಾರು 40 ಬಾಕ್ಸ್ ಟೊಮೆಟೊ ಕದ್ದಿದ್ದಾರೆ. ಭಾನುವಾರ ಬೆಳಗ್ಗೆ ಟೊಮೆಟೊ ಬಿಡಿಸಲೆಂದು ತೋಟಕ್ಕೆ ಬಂದಾಗ ಗಿಡಗಳನ್ನು ಮುರಿದು ಟೊಮೆಟೊ ಕಿತ್ತಿರುವುದು ಬೆಳಕಿಗೆ ಬಂದಿದೆ.
ರೈತ ಜಗದೀಶ್ ಮಾತನಾಡಿ, "ಮೊದಲ ಕೊಯ್ಲಿನಲ್ಲಿ 40 ಬಾಕ್ಸ್ ಟೊಮಟೊ ಸಂಗ್ರಹವಾಗಿತ್ತು. ಅದಾದ ಎರಡು ದಿನದ ಬಳಿಕ ಕನಿಷ್ಠ 80 ಬಾಕ್ಸ್ ಆಗುವ ನಿರೀಕ್ಷೆಯಿತ್ತು. ಆದರೆ, ಭಾನುವಾರ ಕೇವಲ 20 ಬಾಕ್ಸ್ ಸಂಗ್ರಹವಾಯಿತು. ಭಾನುವಾರ (ಜು. 9) ರಾತ್ರಿ ನಡೆದ ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಬೆಳೆ ಕಳ್ಳರು ಪಾಲಾಯಿತು. ಆದ್ದರಿಂದ ಹಗಲು- ರಾತ್ರಿ ಖುದ್ದು ತೋಟದಲ್ಲೇ ಕಾವಲು ಕಾಯುತ್ತಿದ್ದೇವೆ. ಗ್ರಾಮಾಂತರ ಪೊಲೀಸ್ ಠಾಣೆಗೂ ಈ ಬಗ್ಗೆ ದೂರು ನೀಡಿದ್ದೇವೆ" ಎಂದು ವಿವರಿಸಿದರು.
ಇದನ್ನೂ ಓದಿ : ಟೊಮೆಟೊ ದುಬಾರಿ: ಕಳ್ಳರಿಂದ ತರಕಾರಿ ರಕ್ಷಿಸಲು ಪಾಳಿಯಲ್ಲಿ ಕಾವಲು ಕಾಯುತ್ತಿರುವ ರೈತರು!
ಜಗದೀಶ್ ಅವರ ಪತ್ನಿ ಶಶಿಕಲಾ ಮಾತನಾಡಿ, "ಶನಿವಾರ ಮಧ್ಯಾಹ್ನ ಮಳೆ ಸುರಿಯುತ್ತಿದ್ದ ವೇಳೆ ಆರು ಮಂದಿ ತೋಟ ನೋಡಲು ಬಂದಿದ್ದರು. ಒಂದಷ್ಟು ಹಣ್ಣು ಕಿತ್ತುಕೊಂಡರು. ತೋಟದಿಂದ ಹೊರ ಹೋಗುವಂತೆ ಹೇಳಿದರೂ ಕೇಳಲಿಲ್ಲ. ಆಗ ಪತಿಗೆ ಕರೆ ಮಾಡುವುದಾಗಿ ಹೆದರಿಸಿದಾಗ ರಾತ್ರಿಗೆ ಬರೋಣ ಎಂದು ತೆಲುಗಿನಲ್ಲಿ ಮಾತನಾಡಿಕೊಂಡು ಹೊರಟು ಹೋದರು. ಅವರೇ ಕೃತ್ಯ ಎಸಗಿರಬಹುದೆಂಬ ಅನುಮಾನವಿದೆ" ಎಂದು ಹೇಳಿದರು.