ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಮೇಲ್ಮನವಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಅದು ಖಾಸಗಿ ವ್ಯಕ್ತಿಯ ಅರ್ಜಿ, ಅದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತಮ್ಮಶೆಟ್ಟಿಹಳ್ಳಿಯಲ್ಲಿರುವ ಹಿಟಾಚಿ ಎನರ್ಜಿ ಇಂಡಿಯಾ ಸಂಸ್ಥೆಯ ಪವರ್ ಕ್ವಾಲಿಟಿ ಪ್ರಾಡಕ್ಟ್ಸ್ ಫ್ಯಾಕ್ಟರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ ಸುಧಾಕರ್, ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಭಾಗಿಯಾಗಿದ್ರು.
ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಿಎಂ: ಉದ್ಘಾಟನೆ ನಂತರ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು. ಮಡಿಕೇರಿಯಲ್ಲಿ ನಿಷೇದಾಜ್ಞೆ ಜಾರಿಯಿಂದ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ರದ್ದಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಪ್ರತಿಪಕ್ಷದ ನಾಯಕರು ಬಹಳ ಗೊಂದಲದಲ್ಲಿದ್ದಾರೆ. ಎಲ್ಲಾ ಗೊಂದಲಗಳು ಸಿದ್ದರಾಮಯ್ಯ ಅವರ ಹೇಳಿಕೆಗಳಿಂದ ಆಗಿರುವುದು.
ಸಾವರ್ಕರ್ ಫೋಟೋ ಮುಸಲ್ಮಾನರ ಏರಿಯಾದಲ್ಲಿ ಹಾಕಬಾರದು ಅಂತ ನಾವು ಹೇಳಿಲ್ಲ. ಸುಮಾರು ಗೊಂದಲಗಳನ್ನು ಅವರೇ ಸೃಷ್ಟಿ ಮಾಡಿರುವುದು, ನಾವಲ್ಲ ಎಂದು ಸಿಎಂ ಟಾಂಗ್ ನೀಡಿದರು. ಸಿದ್ದರಾಮಯ್ಯ ಹೇಳ್ತಿರೋದೆಲ್ಲ ಶುದ್ಧ ಸುಳ್ಳು. ಮೊಟ್ಟೆ ಎಸೆತ ಪ್ರಕರಣದ ಬಗ್ಗೆ ತನಿಖೆಗೆ ಆದೇಶ ಮಾಡಿದ್ದೇವೆ. ಅವರಿಗೆ ರಕ್ಷಣೆಯನ್ನೂ ನೀಡಿದ್ದೇವೆ. ಆ ಸ್ಥಾನಕ್ಕೆ ಗೌರವ ನೀಡುವ ಬಗ್ಗೆ ಹೇಳಿದ್ದೇನೆ ಎಂದರು.
ಆದೇಶ ಜಾರಿಗೆ ತರಲು ಸಿದ್ಧತೆ: ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸರ್ಕಾರಕ್ಕೆ ಇಂತಹದ್ದನ್ನು ಮಾಡುವ ಅವಶ್ಯಕತೆಯಿಲ್ಲ. ಎಸಿಬಿ ರದ್ದುಗೊಳಿಸಿದ ವಿರುದ್ಧ ಸುಪ್ರಿಂ ಕೋರ್ಟ್ಗೆ ಖಾಸಗಿಯವರು ಮೇಲ್ಮನವಿ ಅರ್ಜಿ ಸಲ್ಲಿಸಿರುವುದು. ಹಾಗಾಗಿ ಖಾಸಗಿ ವ್ಯಕ್ತಿಗಳಿಗೂ, ನಮಗೂ ಸಂಬಂಧವಿಲ್ಲ. ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ಎಸಿಬಿ ರದ್ದುಗೊಳಿಸಿ ತೀರ್ಪು ನೀಡಿರುವ ಹೈಕೋರ್ಟ್ ಆದೇಶವನ್ನು ಪಾಲಿಸುತ್ತೇವೆ. ಈಗಾಗಲೇ ಹೈಕೋರ್ಟ್ ಆದೇಶವನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ. ಹೀಗಾಗಿ ನಾವು ಮೇಲ್ಮನವಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಎಸಿಬಿ ರದ್ಧತಿ ಬಗ್ಗೆ ಅಧ್ಯಯನ ವರದಿ ನೀಡಲು ಕಾನೂನು ಇಲಾಖೆಗೆ ಸೂಚನೆ: ಸಿಎಂ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವಾಗಿ ದೇವನಹಳ್ಳಿ ಘೋಷಣೆ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಈ ಹಿನ್ನೆಲೆ ದೊಡ್ಡಬಳ್ಳಾಪುರದಲ್ಲಿ ಸಂಘ ಸಂಸ್ಥೆಗಳು ಹೋರಾಟಕ್ಕೆ ಇಳಿದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇದರ ಬಗ್ಗೆ ಚರ್ಚೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ವರದಿ, ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಬಳಿಕ ಯಾರಿಗೂ ಅನ್ಯಾಯವಾಗದಂತೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಮತ್ತೊಂದೆಡೆ ಎಸಿಬಿ ರದ್ದುಪಡಿಸಿ ಹೈಕೋರ್ಟ್ ನೀಡಿದ ತೀರ್ಪನ್ನು ತಾವು ಗೌರವಿಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಹೇಳಿದ್ದಾರೆ. ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕೆಂದು ತೀರ್ಪು ನೀಡಿದ ಹೈಕೋರ್ಟ್ ಆದೇಶದ ವಿರುದ್ಧ ನಾವು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಹೋಗುವುದಿಲ್ಲವೆಂದು ಹೇಳಿದ್ದಾರೆ.