ದೊಡ್ಡಬಳ್ಳಾಪುರ: ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ದೊಡ್ಡಬಳ್ಳಾಪುರಕ್ಕೆ ಆಗಮಿಸಲಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 100 ಬೆಡ್ ಸಾಮರ್ಥ್ಯದ 'ಮೇಕ್ ಶಿಫ್ಟ್ ಆಸ್ಪತ್ರೆ' ಮತ್ತು ಹೊಸಕೋಟೆಯಲ್ಲಿನ ಸಾರ್ವಜನಿಕ ಆಸ್ಪತ್ರೆಯನ್ನು ಸಿಎಂ ಉದ್ಘಾಟನೆ ಮಾಡಲಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ನೇತೃತ್ವದಲ್ಲಿ ಅತ್ಯಾಧುನಿಕವಾದ 100 ಬೆಡ್ ಸಾಮರ್ಥ್ಯದ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಆಸ್ಪತ್ರೆ ನಿರ್ಮಾಣವಾಗಿರುವುದು ಈ ಆಸ್ಪತ್ರೆಯ ವಿಶೇಷತೆ.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸ್ಥಳೀಯ ಕಂಪನಿಗಳ ಸಿಎಸ್ಆರ್ ಅನುದಾನದಲ್ಲಿ ಮತ್ತಷ್ಟು ವೈಜ್ಞಾನಿಕ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಈ ಆಸ್ಪತ್ರೆ 25 ಐಸಿಯು, 25 ವೆಂಟಿಲೇಟರ್ ಬೆಡ್ ಮತ್ತು 50 ಆಕ್ಸಿಜನ್ ಬೆಡ್ ಒಳಗೊಂಡಿರುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ಮೆಡಿಕಲ್ ಕಾಲೇಜು ಇಲ್ಲದೆ ಇರುವುದು ದೊಡ್ಡಬಳ್ಳಾಪುರ ನಗರದಲ್ಲಿ ಆಸ್ಪತ್ರೆ ನಿರ್ಮಾಣವಾಗಲು ಕಾರಣವಾಗಿದೆ. ಈಗಾಗಲೇ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯನ್ನ ಜಿಲ್ಲಾಸ್ಪತ್ರೆಯಾಗಿ ಬಜೆಟ್ನಲ್ಲಿಯೇ ಘೋಷಣೆ ಮಾಡಲಾಗಿದೆ. ಅದಕ್ಕೆ ಸಹಕಾರಿಯಾಗುವ ರೀತಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣವಾಗಿದೆ. ಈ ಆಸ್ಪತ್ರೆಯಿಂದ ಚಿಕ್ಕಬಳ್ಳಾಪುರ, ಗೌರಿಬಿದನೂರು, ದೇವನಹಳ್ಳಿ, ನೆಲಮಂಗಲ ಸೇರಿಂದತೆ ಸುತ್ತಮುತ್ತಲಿನ ಸಾವಿರಾರು ಜನರಿಗೆ ಸಹಕಾರಿಯಾಗಲಿದೆ.
ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಸೇರಿದಂತೆ ಸಚಿವ ಸಂಪುಟ ಹಲವು ಸಚಿವರು ಭಾಗಿಯಾಗಲಿದ್ದಾರೆ.
ಕಾರ್ಯಕ್ರಮಕ್ಕೆ 100 ಜನರಿಗೆ ಅವಕಾಶ, ಸಾರ್ವಜನಿಕರಿಗೆ ಪ್ರವೇಶವಿಲ್ಲ
ಮುಖ್ಯಮಂತ್ರಿ ಆಗಮನದ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, 330 ಪೊಲೀಸ್ ಸಿಬ್ಬಂದಿ, 1 ಕೆಎಸ್ಆರ್ಪಿ ತುಕಡಿ, 2 ಡಿಎಆರ್, 2 ಅಗ್ನಿಶಾಮಕ ವಾಹನವನ್ನ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಯಲಹಂಕ ಬಿಎಂಎಸ್ ಕಾಲೇಜ್ ನಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ಖಾಕಿ ಕಾವಲು ಇರಲಿದೆ. ಕೋವಿಡ್ -19 ಹಿನ್ನೆಲೆ ವೇದಿಕೆ ಕಾರ್ಯಕ್ರಮದಲ್ಲಿ ಅಯೋಜಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ 100 ಜನರು ಮಾತ್ರ ಭಾಗವಹಿಸುವಷ್ಟು ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಹಂತದಲ್ಲಿ ತಪಾಸಣೆ ನಡೆಸಿ ನಂತರ ಕಾರ್ಯಕ್ರಮ ನಡೆಯುವ ಸ್ಥಳ ಹೋಗಬೇಕು. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವೆಲ್ಲವೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನಾ ವಂಶಿಕೃಷ್ಣ ತಿಳಿಸಿದರು.