ಬೆಂಗಳೂರು: ದೂರವಾಣಿ ಕದ್ದಾಲಿಕೆ ಆರೋಪ ಸ್ವಪಕ್ಷೀಯ ಶಾಸಕರಿಂದಲೇ ಬಂದಿರುವುದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಿದ್ದು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಮಧ್ಯಾಹ್ನ ಕುಮಾರಕೃಪ ಅತಿಥಿಗೃಹದಲ್ಲಿ ಶಾಸಕ ಅರವಿಂದ ಬೆಲ್ಲದ್ ಅವರ ಟೆಲಿಫೋನ್ ಕದ್ದಾಲಿಕೆ ಆಗುತ್ತಿದೆ. ಈ ಸಂಬಂಧ ಎರಡು ದಿನಗಳ ಹಿಂದೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಈ ಹಿನ್ನೆಲೆ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಸಿಎಂ ಯಡಿಯೂರಪ್ಪ ಬುಲಾವ್ ನೀಡಿದ್ದಾರೆ. ಸಿಎಂ ಸೂಚನೆ ಬರುತ್ತಿದ್ದಂತೆ ಕಾವೇರಿಗೆ ಆಗಮಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ದೂರವಾಣಿ ಕದ್ದಾಲಿಕೆ ಆರೋಪದ ಕುರಿತು ಮಾತುಕತೆ ನಡೆಸಿದರು.
ದೂರು ನೀಡಿದ ನಂತರ ಕೈಗೊಂಡ ಕ್ರಮ, ಕದ್ದಾಲಿಕೆಯಂತಹ ಪ್ರಯತ್ನದ ಸಾಧ್ಯಾಸಾಧ್ಯತೆ ಕುರಿತು ಸಿಎಂ ಮಾತುಕತೆ ನಡೆಸಿದರು. ದೂರವಾಣಿ ಕರೆ ಕದ್ದಾಲಿಕೆ ಆರೋಪ ಸರ್ಕಾರಕ್ಕೆ ಕೆಟ್ಟ ಹೆಸರು ತರಲಿದ್ದು, ಅದರಲ್ಲಿಯೂ ಸ್ವಪಕ್ಷೀಯ ಶಾಸಕರೇ ಆರೋಪ ಮಾಡಿದರೆ ಪ್ರತಿಪಕ್ಷಗಳಿಗೆ ಆಹಾರವಾಗಬೇಕಾಗಲಿದೆ ಎನ್ನುವ ಕಾರಣಕ್ಕೆ ಸಿಎಂ ಯಡಿಯೂರಪ್ಪ ಈ ವಿಚಾರದಲ್ಲಿ ಎಚ್ಚರಿಕೆ ನಡೆ ಅನುಸರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.