ನೆಲಮಂಗಲ : ಕಾರ್ಮಿಕ ಹಿತರಕ್ಷಣೆಗಳಿಗೆ ಒತ್ತು ನೀಡುವ 3 ದಿನಗಳ ಬೆಂಗಳೂರು ಉತ್ತರ ಜಿಲ್ಲಾ 12 ನೇ ಕಾರ್ಮಿಕ ಸಮ್ಮೇಳನ ದಾಬಸ್ ಪೇಟೆಯಲ್ಲಿ ನಡೆಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಲೀಕರ ಪರವಾಗಿ ನಿಯಮಾವಳಿಗಳನ್ನು ರೂಪಿಸುತ್ತಿದೆ. ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕಾರ್ಮಿಕರು ಹೋರಾಟದ ಮೂಲಕ ನ್ಯಾಯ ಪಡೆಯಬೇಕೆಂದು ಸಮ್ಮೇಳನದಲ್ಲಿ ಕರೆ ನೀಡಲಾಯಿತು.
ತಾಲೂಕಿನ ದಾಬಸ್ ಪೇಟೆಯ ಖಾಸಗಿ ಸಂಭಾಗಣದಲ್ಲಿ ಸಿಐಟಿಯುನಿಂದ ಸಮ್ಮೇಳನವನ್ನು ಆಯೋಜಿಸಿದ್ದು, ಸಿಐಟಿಯು ರಾಜ್ಯ ಸಮಿತಿಯ ಉಪಾಧ್ಯಕ್ಷ ಉಮೇಶ್ ಸಸಿಗೆ ನೀರು ಹಾಕುವ ಮೂಲಕ ಸಮ್ಮೇಳನಕ್ಕೆ ಚಾಲನೆ ದೊರೆಯಿತು. ಕಾರ್ಮಿಕ ಕಾಯ್ದೆ, ಕಾರ್ಮಿಕರ ಸಂಘ ಸ್ಥಾಪನೆ, ಜಾಗತಿಕ ಉದ್ಯೋಗ ಮಾಹಿತಿ ಹೀಗೆ ಹತ್ತು ಹಲವು ಕಾರ್ಮಿಕ ನೀತಿಗಳ ಬಗ್ಗೆ ಚರ್ಚೆ ನಡೆಯಿತು. ಇದೇ ವೇಳೆ, ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿಮೀನಾಕ್ಷಿ ಸುಂದರಂ ಕಾರ್ಮಿಕರ ಆದಾಯ ಮಟುಕುಗೊಳಿಸಿ ಮಾಲೀಕರು ತಮ್ಮ ಆದಾಯವನ್ನು ದುಪ್ಪಟ್ಟುಗೊಳಿಸಿ ಕೊಳ್ಳುತ್ತಿದ್ದಾರೆ. ಕಾರ್ಮಿಕರು ಸಂಘ ಕಟ್ಟಿಕೊಳ್ಳುವುದು ಅವರ ಮೂಲಭೂತ ಹಕ್ಕು. ಸಂಘಕ್ಕೆ ಮಾನ್ಯತೆ ನೀಡುವುದು ಮಾಲೀಕರ ಕರ್ತವ್ಯ. ಮಾಲೀಕರ ದುಪ್ಪಟ್ಟು ಮಾಡಿಕೊಳ್ಳುತ್ತಿರುವುದರ ವಿರುದ್ಧ ಸೆಪ್ಟೆಂಬರ್ 30 ರಂದು ದೆಹಲಿಯಲ್ಲಿ ಸಂಘಟನೆಗಳ ಬಹಿರಂಗ ಸಭೆ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುವುದಾಗಿ ಹೇಳಿದರು.
ನೆಲಮಂಗಲ ತಾಲೂಕು ಅಧ್ಯಕ್ಷ ತಿರುಮಲಾಚಾರ್, ದಾಬಸ್ ಪೇಟೆ ವಲಯದಲ್ಲಿ ಹೆಚ್ಚು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಹಾವಳಿ ಹೆಚ್ಚಾಗಿದೆ. ಕಾರ್ಮಿಕರಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳನ್ನು ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ದಾಬಸ್ ಪೇಟೆಯಲ್ಲಿ ಕಾರ್ಮಿಕ ಸಮ್ಮೇಳನ ಮಾಡಿದ್ದಾಗಿ ತಿಳಿಸಿದರು.