ದೊಡ್ಡಬಳ್ಳಾಪುರ : ಸ್ನೇಹಿತೆಯ ಹೆರಿಗೆಗೆ ಹಣ ಹೊಂದಿಸಬೇಕೆಂದು ನೆಪ ಹೇಳಿ ಯುವತಿಯೋರ್ವಳು ಬೈಕ್ ಸವಾರನಿಂದ ಡ್ರಾಪ್ ತೆಗೆದುಕೊಂಡು ಬಳಿಕ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಯುವತಿ ತನ್ನ ಗ್ಯಾಂಗ್ನ ಹುಡುಗರನ್ನು ಕರೆದು ಬೈಕ್ ಸವಾರನ ಸರ ಎಗರಿಸಿ ಪರಾರಿಯಾಗಿದ್ದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಈ ಸರಗಳ್ಳರ ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂವರು ಅರೆಸ್ಟ್ : ದೊಡ್ಡಬಳ್ಳಾಪುರ ತಾಲೂಕಿನ ವಡ್ಡರಹಳ್ಳಿಯ ನಿವಾಸಿ ನಂಜೇಗೌಡ(51) ಯುವತಿಗೆ ಡ್ರಾಪ್ ನೀಡಲು ಹೋಗಿ ಚಿನ್ನದ ಸರ ಕಳೆದುಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೊತ್ತೂರು ಗ್ರಾಮದ ಯುವತಿ ಲಕ್ಷ್ಮಿ(24), ರಾಜೇಶ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಪೂಜಾರ್ಲಹಳ್ಳಿಯ ಮಣಿಕಂಠ ಎಂಬುವರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ
ಘಟನೆ ಹಿನ್ನೆಲೆ : ನಂಜೇಗೌಡ ಅವರು ಎಂ ಸ್ಯಾಂಡ್ ಮರಳು ಮಾರಾಟಗಾರರು. ತನ್ನ ಕೊರಳಿನಲ್ಲಿ ಸದಾ ಎರಡು ಚಿನ್ನದ ಸರಗಳನ್ನು ಧರಿಸುತ್ತಿದ್ದರು. ಕಳೆದೊಂದು ತಿಂಗಳಿಂದ ರಾಜೇಶ್ ಮತ್ತು ಮಣಿಕಂಠ ನೆಪ ಮಾಡಿಕೊಂಡು ನಂಜೇಗೌಡರನ್ನು ಮಾತನಾಡಿಸುತ್ತಿದ್ದರು. ಮಾತನಾಡುವ ನೆಪದಲ್ಲಿ ಅವರ ಹಿನ್ನೆಲೆ ತಿಳಿದುಕೊಂಡಿದ್ದರು. ಸರ ದೋಚಲು ಲಕ್ಷ್ಮಿಯನ್ನು ಬಳಸಿಕೊಳ್ಳುತ್ತಾರೆ.
ಮಾರ್ಚ್ 26ರ ಬೆಳಗ್ಗೆ 11 ಗಂಟೆಗೆ ನಂಜೇಗೌಡ ಅವರು ದೊಡ್ಡಬಳ್ಳಾಪುರ ನಗರದ ಆರ್ಎಂಸಿ ಬಳಿ ಬೈಕ್ನಲ್ಲಿ ಬರುತ್ತಾರೆ. ಆತನಿಗೆ ಅಡ್ಡವಾಗಿ ಬಂದ ಲಕ್ಷ್ಮಿ ತನ್ನ ಸ್ನೇಹಿತೆಯ ಡೆಲಿವರಿಗೆ ಹಣ ಹೊಂದಿಸಬೇಕು, ಊರಿಗೆ ಡ್ರಾಪ್ ಕೊಡಿ ಎಂದು ಕೇಳಿಕೊಳ್ಳುತ್ತಾಳೆ.
ಮಾನವೀಯತೆಯ ದೃಷ್ಟಿಯಿಂದ ನಂಜೇಗೌಡ ಅವರು ಯುವತಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೊರಡುತ್ತಾರೆ. ಘಾಟಿ ಸಮೀಪ ಆಂಜನೇಯ ದೇವಸ್ಥಾನದ ಬಳಿ ನಿರ್ಜನ ಪ್ರದೇಶಕ್ಕೆ ಅವರನ್ನು ಕರೆದೊಯ್ಯುತ್ತಾಳೆ.
ಇದನ್ನೂ ಓದಿ: ಹೋಳಿ ಆಚರಣೆಗೆ ನಿರ್ಬಂಧ.. ಕಾರವಾರ ಜನತೆಯ ಅಸಮಾಧಾನ!
ಅನುಮಾನ ಬಂದ ನಂಜೇಗೌಡ ಅವರು ದಾರಿ ಮಧ್ಯೆ ಬೈಕ್ ನಿಲ್ಲಿಸಿದ್ದಾರೆ. ಅವರ ಹಿಂದೆಯೇ ಬ್ಲ್ಯಾಕ್ ಪಲ್ಸರ್ ನಲ್ಲಿ ಬಂದ ರಾಜೇಶ ಮತ್ತು ಮಣಿಕಂಠ ಇಬ್ಬರು ನಂಜೇಗೌಡರ ಮೇಲೆ ಹಲ್ಲೆ ನಡೆಸಿ 40 ಗ್ರಾಂ ತೂಕದ ಎರಡು ಚಿನ್ನದ ಸರ ಎಗರಿಸಿ ಪರಾರಿಯಾಗಲು ಯತ್ನಿಸಿದ್ದಾರೆ.
ಈ ಸಮಯದಲ್ಲಿ ಸಾರ್ವಜನಿಕರು ಮಣಿಕಂಠನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ವಿಚಾರಣೆಯ ಮೇಲೆ ಪರಾರಿಯಾಗಿದ್ದ ರಾಜೇಶ ಮತ್ತು ಲಕ್ಷ್ಮಿಯನ್ನು ಬಂಧಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.