ನೆಲಮಂಗಲ : ನಗರ ಪ್ರದೇಶದಲ್ಲಿ ಮಾತ್ರ ಸರಗಳ್ಳತನ ಮಾಡುತ್ತಿದ್ದ ಪಲ್ಸರ್ ಸರಗಳ್ಳರು ಈಗ ಗ್ರಾಮಾಂತರ ಭಾಗಕ್ಕೆ ಕಾಲಿಟ್ಟಿದ್ದಾರೆ. ನೆಲಮಂಗಲದಲ್ಲಿ ಎರಡು ಮತ್ತು ದೊಡ್ಡಬಳ್ಳಾಪುರದಲ್ಲಿ ಒಂದು ಸರಗಳ್ಳತನ ಪ್ರಕರಣ ವರದಿಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ರಾಮದೇನಹಳ್ಳಿಯಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ರಾಮದೇನಹಳ್ಳಿಯಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುವಾಗ ಕಪ್ಪು ಪಲ್ಸರ್ನಲ್ಲಿ ಬಂದ ಸರಗಳ್ಳರು ಏನೋ ಬಿದ್ದಿದೆ ಎಂದು ಮಹಿಳೆಯ ದಿಕ್ಕುತಪ್ಪಿಸಿ ಸುಮಾರು 40 ಗ್ರಾಂ ತೂಕದ ಮಾಂಗಲ್ಯಸರವನ್ನು ಕಸಿದು ಪರಾರಿಯಾಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಗಿಡ್ಡೇನಹಳ್ಳಿ ಹಾಗೂ ತಿಮ್ಮಭೋವಿಪಾಳ್ಯದಲ್ಲಿ ಎರಡು ಸರಗಳ್ಳತನ ಪ್ರಕರಣ ನಡೆದಿದೆ. ಗಿಡ್ಡೇನಹಳ್ಳಿ ಬಳಿ ಮುನಿಯಮ್ಮ ಹಾಗೂ ತಿಮ್ಮಭೋವಿಪಾಳ್ಯದ ಹೊನ್ನಮ್ಮ ಎಂಬುವವರ ಸರ ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.