ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ಮಳೆ ಕೊರತೆಯಿಂದಾಗಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ಕೇಂದ್ರ ತಂಡ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಭೇಟಿ ನೀಡಿದವು. ಕೇಂದ್ರ ಜಲ ಆಯೋಗದ ನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡವು ಇಂದು ಜಿಲ್ಲೆಯ ವಿವಿದೆಡೆ ಭೇಟಿ ಪರಿಶೀಲನೆ ನಡೆಸಿತು. ಜಿಲ್ಲೆಯಲ್ಲಿ ಮಳೆಕೊರತೆಯಿಂದ 49559.57 ಹೆಕ್ಟೇರ್ ಬೆಳೆಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಾದ ಡಾ ಶಿವಶಂಕರ್ ಎನ್ ಅವರು ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಕೇಂದ್ರ ಜಲ ಆಯೋಗದ ನಿರ್ದೇಶಕರಾದ ಅಶೋಕ್ ಕುಮಾರ್ ವಿ, ಎಂ.ಎನ್.ಸಿ.ಎಫ್.ಸಿಯ ಉಪನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಸಂಗೀತ್ ಕುಮಾರ್, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರರಾದ ಡಾ. ಜಿ.ಎಸ್ ಶ್ರೀನಿವಾಸ ರೆಡ್ಡಿ ನೇತೃತ್ವದ ತಂಡ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಅಧಿಕಾರಿಗಳು ರೈತರಿಂದ ಮಾಹಿತಿ ಪಡೆದರು. ರೈತರು ಮಳೆ ಕೊರತೆಯಿಂದ ಉಂಟಾಗಿರುವ ನಷ್ಟ ಸಂಬಂಧ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ವೇಳೆ ಕೆಲ ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಜಿಲ್ಲೆಯಲ್ಲಿ ಒಟ್ಟು ಬೆಳೆ ಹಾನಿ : ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಒಟ್ಟು 49,559.57 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದರಲ್ಲಿ 46,003.44 ಹೆಕ್ಟೇರ್ ರಾಗಿ, 3,477.68 ಹೆಕ್ಟೇರ್ ಮುಸುಕಿನ ಜೋಳ, 68.95 ಹೆಕ್ಟೇರ್ ತೊಗರಿ, 9.50 ಹೆಕ್ಟೇರ್ನಲ್ಲಿನ ನೆಲಗಡಲೆ ಸೇರಿದಂತೆ ಒಟ್ಟು 49,559.57 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬಗೆಯ ಬೆಳೆಗಳು ಹಾನಿಯಾಗಿರುತ್ತವೆ. ಈ ಕುರಿತು ಸಮಗ್ರ ಮಾಹಿತಿ ಹಾಗೂ ಛಾಯಾಚಿತ್ರಗಳ ಮೂಲಕ ಪ್ರಾತ್ಯಕ್ಷಿಕೆ ಸಹ ಕೇಂದ್ರ ತಂಡಕ್ಕೆ ನೀಡಲಾಗಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, ಹೆಚ್ಚಿನ ಬೆಳೆಹಾನಿಯಾಗಿರುತ್ತದೆ. ಜೊತೆಗೆ ಕುಡಿಯುವ ನೀರಿನ ಕೊರತೆ, ಮೇವು ಕೊರತೆ ಹಾಗೂ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳಾದ ಡಾ.ಶಿವಶಂಕರ್ ಕೇಂದ್ರ ತಂಡಕ್ಕೆ ಮಾಹಿತಿಯನ್ನು ನೀಡಿದರು.
ರಾಜ್ಯಾದ್ಯಂತ ಕೇಂದ್ರ ತಂಡದ ಬರ ಪರಿಶೀಲನೆ : ಕಳೆದೆರೆಡು ದಿನಗಳಿಂದ ಕೇಂದ್ರ ತಂಡವು ವಿವಿಧ ಜಿಲ್ಲೆಗಳಲ್ಲಿ ಬರ ಪರಿಶೀಲನೆ ನಡೆಸುತ್ತಿದೆ. ಈಗಾಗಲೇ ಚಿತ್ರದುರ್ಗ, ದಾವಣಗೆರೆ, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಕೇಂದ್ರ ತಂಡದ ಅಧಿಕಾರಿಗಳಿಗೆ ಬೆಳೆ ನಷ್ಟದ ಕುರಿತು ವಿವರಿಸಿದ್ದಾರೆ. ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ವಿಜಯನಗರ, ದಾವಣಗೆರೆ ಜಿಲ್ಲೆಯಲ್ಲಿ ಬೆಳೆಹಾನಿ ವೀಕ್ಷಿಸಿದ ಕೇಂದ್ರ ತಂಡ : ಸೂಕ್ತ ಪರಿಹಾರದ ಭರವಸೆ