ದೊಡ್ಡಬಳ್ಳಾಪುರ: ತಾಲೂಕಿನ ನೆರಳಘಟ್ಟ ಗ್ರಾಮದ ನವೀನ್ ಕುಮಾರ್ ಮನೆಯ ಅಂಗಳದಲ್ಲಿ ಅರಳಿನಿಂತ ಬ್ರಹ್ಮ ಕಮಲ ನೋಡಿದರೆ ನೋಡುಗರ ಮನವೂ ಅರಳುತ್ತದೆ. ರಾತ್ರಿ ಅರಳಿ ಬೆಳಗಾಗುವುದರೊಳಗೆ ಬಾಡಿ ಹೋಗುವ ಬ್ರಹ್ಮ ಕಮಲ ಕ್ಷಣಿಕ ಸಮಯದಲ್ಲಿಯೇ ಎಲ್ಲರ ಕಣ್ಮನ ಸೆಳೆಯುತ್ತದೆ.
ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಸದಸ್ಯರಾದ ನವೀನ್ ಕುಮಾರ್ ತಮ್ಮ ಮನೆಯ ಅಂಗಳದಲ್ಲಿ 7 ವರ್ಷಗಳ ಹಿಂದೆ ಬ್ರಹ್ಮಕಮಲ ಗಿಡವನ್ನು ನೆಟ್ಟರು. ಕೊಟ್ಟಿಗೆ ಗೊಬ್ಬರ ಹಾಕಿ ಪೋಷಣೆ ಮಾಡಿದ ಕಾರಣ ವರ್ಷದಲ್ಲಿಯೇ ಬ್ರಹ್ಮ ಕಮಲದ ಹೂ ಬಿಡಲು ಪ್ರಾರಂಭಿಸಿದೆ. 14 ಅಡಿಗಳವರೆಗೂ ಬೆಳೆದಿರುವ ಗಿಡದಲ್ಲಿ ಪ್ರತಿ ವರ್ಷ ಹೂಗಳ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ನವೀನ್ ಕುಮಾರ್ ಮನೆಯಲ್ಲಿರುವ ಬ್ರಹ್ಮ ಕಮಲ ಗಿಡದಲ್ಲಿ ವರ್ಷದಲ್ಲೇ ನಾಲ್ಕೈದು ಬಾರಿ ಹೂಗಳು ಅರಳುತ್ತೆ. ಈ ವರ್ಷ ಒಮ್ಮೆಲೇ 113 ಹೂಗಳು ಅರಳಿ ನಗುತ್ತಿವೆ. ಅಕ್ಕಪಕ್ಕದ ಮನೆಯವರು ಸಹ ಬಂದು ಬ್ರಹ್ಮ ಕಮಲದ ಸೌಂದರ್ಯ ಸವಿಯುತ್ತಿದ್ದಾರೆ. ಹೂ ಅರಳುವ ಸಮಯದಲ್ಲಿ ಅದು ಬೀರುವ ಪರಿಮಳಕ್ಕೆ ನೋಡುಗರು ಮನ ಸೋಲುತ್ತಾರೆ.
ಬ್ರಹ್ಮ ಕಮಲ ಸಾಮಾನ್ಯವಾಗಿ ಎತ್ತರ ಪ್ರದೇಶದಲ್ಲಿ ಬೆಳೆಯುವ ಹೂವಿನ ಗಿಡ, ಹಿಮಾಲಯದ ಪರ್ವತ ಶ್ರೇಣಿಯಲ್ಲಿ ಗುಂಪು ಗುಂಪಾಗಿ ಬೆಳೆಯುತ್ತೆ. ರಾತ್ರಿ ಸಮಯದಲ್ಲಿ ಅರಳಿದಾಗ ನಕ್ಷತ್ರಗಳೇ ಮಿನುಗುವಂತೆ ದೃಶ್ಯ ವೈಭವ ಕಾಣಿಸುತ್ತೆ. ಮನೆಯಲ್ಲಿ ಬ್ರಹ್ಮ ಕಮಲ ಅರಳಿದರೆ ಅದೃಷ್ಟ ಒಲಿಯುತ್ತೆ ಮತ್ತು ಸಂಪದ್ಭರಿತರಾಗುತ್ತಾರೆಂಬ ನಂಬಿಕೆ ಇದ್ದು, ಜನರು ತಮ್ಮ ಮನೆಯ ಅಂಗಳದಲ್ಲಿ ಬ್ರಹ್ಮ ಕಮಲ ಗಿಡವನ್ನು ನೆಡುತ್ತಾರೆ.