ಹೊಸಕೋಟೆ: ಹೊಸಕೋಟೆ: ಪ್ರೀತಿ ನಿರಾಕರಿಸಿದ ಯುವತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಭಗ್ನಪ್ರೇಮಿಯೊಬ್ಬ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಕೋಲಾ ಮೂಲದ ಉಷಾ (25) ಕೊಲೆಯಾಗಿರುವ ಯುವತಿ. ತಮಿಳುನಾಡು ಮೂಲದ ಗೋಪಾಲಕೃಷ್ಣ (30) ಎಂಬಾತ ಉಷಾಳ ಕೊಲೆಗೈದು, ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೋಪಾಲಕೃಷ್ಣ ಕಳೆದ ಹಲವು ವರ್ಷಗಳಿಂದ ತನ್ನ ಕಂಪನಿಯಲ್ಲೆ ಕೆಲಸ ಮಾಡುತ್ತಿದ್ದ ಉಷಾಳನ್ನ ಪ್ರೀತಿಸುತ್ತಿದ್ದ. ಹೀಗಾಗಿ ಆಕೆಯು ಕಂಪನಿ ಕೆಲಸ ಬಿಟ್ಟು ಬೇರೊಂದು ಕಂಪನಿಗೆ ಸೇರಿಕೊಂಡಿದ್ದಳು.
ಆದರೂ ಬಿಡದ ಭಗ್ನಪ್ರೇಮಿ ಮದುವೆಯಾಗುವಂತೆ ಪೀಡಿಸುತ್ತಿದ್ದು, ಯುವತಿ ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಗೋಪಾಲಕೃಷ್ಣ ಬುಧವಾರ ಮುಂಜಾನೆ ಯುವತಿ ವಾಸವಿದ್ದ ಲಿಂಗದೀರ ಮಲ್ಲಸಂದ್ರ ಗ್ರಾಮದ ಮನೆಗೆ ತೆರಳಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ:
ಕೊಲೆ ಮಾಡಿದ ಬಳಿಕ ಗೋಪಾಲಕೃಷ್ಣ ತಾನು ವಾಸವಿದ್ದ ಗೆದ್ದಲಾಪುರ ಗ್ರಾಮಕ್ಕೆ ಬಂದು ಮನೆಯಲ್ಲಿದ್ದ ವಿಷದ ಬಾಟಲಿ ತೆಗೆದುಕೊಂಡು ಗ್ರಾಮದ ಕೆರೆಯತ್ತ ತೆರಳಿದ್ದಾನೆ. ಕೆರೆಯ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ಈ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ.
ಯುವತಿಯ ಕೊಲೆ ವಿಷಯ ತಿಳಿದ ಅನುಗೊಂಡನಹಳ್ಳಿ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೊಲೆಯಾದ ಉಷಾ ಮೊಬೈಲ್ ಕೊನೆಯ ಡೈಲ್ ನಂಬರ್ ಲೊಕೇಷನ್ ಆಧರಿಸಿ ಗೆದ್ದಲಾಪುರ ಗ್ರಾಮದ ಕೆರೆ ಆವರಣದಲ್ಲಿ ಬಂದು ನೋಡಿದಾಗ ಗೋಪಾಲಕೃಷ್ಣನೇ ಕೊಲೆ ಮಾಡಿ, ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಈ ಹಿಂದೆಯೇ ವಿವಾಹವಾಗಿತ್ತು:
ಗೋಪಾಲಕೃಷ್ಣನಿಗೆ ಈ ಹಿಂದೆಯೇ ಮದುವೆಯಾಗಿದ್ದು, ಪತ್ನಿ ಸಾವನ್ನಪ್ಪಿದ್ದಾಳೆ. ನಂತರ ಗೆದ್ದಲಾಪುರ ಗ್ರಾಮದ ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ಖಾಸಗಿ ಕಂಪನಿಗೆ ಕೆಲಸ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಯುವತಿಯ ಕೊಲೆ ಹಾಗೂ ಕೊಲೆಯ ನಂತರ ಗೋಪಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವತಿಯ ಕೊಲೆ ಸಂಬಂಧ ಅನುಗೊಂಡನಹಳ್ಳಿ ಠಾಣೆ ಹಾಗೂ ಕೊಲೆ ಆರೋಪಿ ಗೋಪಾಲಕೃಷ್ಣ ಆತ್ಮಹತ್ಯೆ ಕುರಿತಂತೆ ತಿರುಮಶೆಟ್ಟಿಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತನಿಖೆ ಬಳಿಕ ಯುವತಿಯ ಕೊಲೆ ಹಾಗೂ ಭಗ್ನಪ್ರೇಮಿಯ ಆತ್ಮಹತ್ಯೆ ಪ್ರಕರಣಕ್ಕೆ ನಿಖರವಾದ ಕಾರಣ ಗೊತ್ತಾಗಲಿದೆ.