ಆನೇಕಲ್: ಕರಡಿಯೊಂದು ಗ್ರಾಮಕ್ಕೆ ನುಗ್ಗಿ ಜನರ ಮೇಲೆ ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿ ಪರಾರಿಯಾದ ಘಟನೆ ತಾಲೂಕಿನ ಶೆಟ್ಟಹಳ್ಳಿ, ತಟ್ನಹಳ್ಳಿ ಭಾಗದ ಗ್ರಾಮಗಳಲ್ಲಿ ನಡೆದಿದೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಮಂಗಳವಾರ ಮುಂಜಾನೆ 6.30ರ ವೇಳೆಗೆ ರಾಮಕ್ಕ, ಮಂಜುನಾಥ್ ಎಂಬುವರು ಸೇರಿ ಹಲವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಬಳಿಕ ಗಾಯಾಳುಗಳನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದೆ.
ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರ ತಂಡ ಆಗಮಿಸಿ ಕರಡಿಗಾಗಿ ಗ್ರಾಮದ ಸುತ್ತಮುತ್ತಲಿನ ಕಡೆಗಳಲ್ಲಿ ಶೋಧ ನಡೆಸಿದೆ. ಆದರೆ ಕರಡಿಯ ಸುಳಿವು ಸಿಗಲಿಲ್ಲ. ಜೊತೆಗೆ ಬೋನ್ ತರಿಸಿಕೊಂಡಿರುವ ಅಧಿಕಾರಿಗಳು ಕರಡಿಯ ಸೆರೆಹಿಡಿಯಲು ಮುಂದಾಗಿದ್ದಾರೆ.
ಇದನ್ನೂ ಓದಿ : ಹೊಸ 10 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ನಿರ್ಧಾರ
ಮೊನ್ನೆಯಷ್ಟೇ ತುಮಕೂರಿನಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಂರಕ್ಷಿಸಿ ತರಲಾಗಿದ್ದ ಕರಡಿಯೊಂದು ಬೋನ್ನಿಂದ ತಪ್ಪಿಸಿಕೊಂಡು ಚಾಲಕನ ಮೇಲೆ ದಾಳಿ ನಡೆಸಿ ಪರಾರಿಯಾಗಿತ್ತು. ಅದೇ ಕರಡಿ ಜನರ ಮೇಲೆ ದಾಳಿ ನಡೆಸಿದೆ ಎಂಬ ಸಂಶಯ ವ್ಯಕ್ತವಾಗಿದೆ. ಮತ್ತೊಂದೆಡೆ ಹೆನ್ನಾಗರ ಸಮೀಪದ ಕಾಚನಾಯಕನಹಳ್ಳಿಯ ಕಂಪನಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಕರಡಿ ಸೆಕ್ಯುರಿಟಿ ಗಾರ್ಡ್ ಮೇಲೆ ದಾಳಿ ನಡೆಸಿದ ದೃಶ್ಯ ಸೆರೆಯಾಗಿದೆ.