ದೇವನಹಳ್ಳಿ: 2022-23ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯು ರಾಜ್ಯದ ಅತ್ಯುತ್ತಮ ಜಿಲ್ಲಾ ಪಂಚಾಯತಿ ಪ್ರಶಸ್ತಿ ಸೇರಿ ಒಟ್ಟು ಆರು ಪ್ರಶಸ್ತಿಗಳಿಗೆ ಭಾಜನವಾಗಿದೆ. ಮಾರ್ಚ್ 24 ರಂದು ಬೆಂಗಳೂರಿನಲ್ಲಿ ನಡೆಯುವ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ನರೇಗಾ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳ ಪ್ರದಾನವಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರವಿ. ಎಂ. ತಿರ್ಲಾಪುರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಗಳೂರು ಜಿಲ್ಲಾ ಪಂಚಾಯತಿಯು ಅತ್ಯುತ್ತಮ ಜಿಲ್ಲಾ ಪಂಚಾಯತ್ ಪ್ರಶಸ್ತಿ ಹಾಗೂ 15 ಲಕ್ಷ ನಗದು ಪುರಸ್ಕಾರ, ದೊಡ್ಡಬಳ್ಳಾಪುರ ತಾಲೂಕು ಪಂಚಾಯತಿ ಅತ್ಯುತ್ತಮ ತಾ.ಪಂ ಪ್ರಶಸ್ತಿ ಹಾಗೂ 10 ಲಕ್ಷ ಪುರಸ್ಕಾರ, ತೂಬಗೆರೆ ಗ್ರಾಮ ಪಂಚಾಯತಿಯು ಅತ್ಯುತ್ತಮ ಗ್ರಾ.ಪಂ ಪ್ರಶಸ್ತಿ ಹಾಗೂ 5 ಲಕ್ಷ ನಗದು ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಜೊತೆಗೆ ಅತ್ಯುತ್ತಮ ಆಡಳಿತ ವಿಭಾಗದಲ್ಲಿ ಬೆಂಗಳೂರು ಜಿ.ಪಂ, ಅತ್ಯುತ್ತಮ ತಾಲೂಕು ಮಟ್ಟದ ರೇಷ್ಮೆ ಇಲಾಖೆ ವಿಭಾಗದಲ್ಲಿ ದೇವನಹಳ್ಳಿ ರೇಷ್ಮೆ ಇಲಾಖೆ ಹಾಗೂ ಜಲ ಸಂಜೀವಿನಿ ಪಂಚಾಯತಿ ವಿಭಾಗದಲ್ಲಿ ಸಾಸಲು ಗ್ರಾ.ಪಂ ಪ್ರಶಸ್ತಿ ಪಡೆದಿವೆ.
ಪ್ರಶಸ್ತಿಗೆ ನಿಗದಿಪಡಿಸಲಾದ ಮಾನದಂಡಗಳಿಗೆ ಅನುಗುಣವಾಗಿ ಜಿಲ್ಲಾ ಪಂಚಾಯತಿಗಳು ಸಲ್ಲಿಸಿದ ಪುಸ್ತಾವನೆಗಳನ್ನು ರಾಜ್ಯ ಮಟ್ಟದ ಆಯ್ಕೆ ಸಮಿತಿಯು ಮೌಲ್ಯಮಾಪನ ಮಾಡಿ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ. ಜಿಲ್ಲೆಯು ನರೇಗಾ ಅಡಿ ಉತ್ತಮ ಪ್ರಗತಿ ಸಾಧಿಸಲು ಶ್ರಮಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ಪ್ರಶಸ್ತಿಯು ಹೊಸ ಸಂತಸ, ಉತ್ಸಾಹ ಮೂಡಿದೆ. ಸಾಧನೆಗೆ ಕಾರಣವಾದ ತಂಡಕ್ಕೆ ಅಭಿನಂದನೆಗಳನ್ನ ಜಿಲ್ಲಾ ಪಂಚಾಯತ್ ಹಾಗೂ ನರೇಗಾ ನೋಡೆಲ್ ಅಧಿಕಾರಿ ಡಾ. ನಾಗರಾಜು ಸಲ್ಲಿಸಿದರು.
ಏಪ್ರಿಲ್ 1ರ ವೇಳೆಗೆ ಜಿ.ಪಂ ತಾ.ಪಂ ಚುನಾವಣೆಗೆ ಮೀಸಲಾತಿ ಪ್ರಕಟ: ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಕುರಿತು ಏಪ್ರಿಲ್ 1ರ ಒಳಗಾಗಿ ಮೀಸಲಾತಿ ಪಟ್ಟಿ ಪ್ರಕಟಿಸುವುದಾಗಿ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾರ್ಚ್ 2ರಂದು ಮಾಹಿತಿ ನೀಡಿತ್ತು. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು 'ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆ'ಗೆ ಸರ್ಕಾರ ತಿದ್ದುಪಡಿ ತಂದಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರದ ಪರ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಮಾಹಿತಿ ನೀಡಿದರು. ಅಲ್ಲದೆ, ಈಗಾಗಲೇ ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಮಾರ್ಚ್ 1ರಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದ್ದು. ಜೊತೆಗೆ, ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಏಪ್ರಿಲ್ 1ರವರೆಗೆ ಕಾಲಾವಕಾಶ ನೀಡಿದೆ. ಅಷ್ಟರ ಒಳಗಾಗಿ ಮೀಸಲಾತಿ ಪಟ್ಟಿ ಸಿದ್ಧಪಡಿಸಿ, ಮುಂದಿನ ಕ್ರಮಕ್ಕಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ವಿವರಿಸಿದ್ದರು.
ಇದನ್ನೂ ಓದಿ : ನಾಳೆ ಮುಷ್ಕರಕ್ಕೆ ಕರೆ ನೀಡಿರುವ ಲಾರಿ ಮಾಲೀಕರ ಸಂಘ: ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ