ದೊಡ್ಡಬಳ್ಳಾಪುರ: ರಸ್ತೆ ಅಪಘಾತದಲ್ಲಿ ಜೈಲು ಜೀವಗಳು ಕೃತಿ ರಚಿಸಿದ ಲೇಖಕ ಜಿ. ಯಲ್ಲಪ್ಪ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಲಿಂಗನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದ ಕಾರು ಅಪಘಾತದಲ್ಲಿ ಲೇಖಕ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ತಲೆಗೆ ತೀವ್ರವಾದ ಪೆಟ್ಟು ಬಿದ್ದ ಹಿನ್ನೆಲೆ ಯಲ್ಲಪ್ಪ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುರುಳಿ, ನಾಗರಾಜು, ನವೀನ್ ಕುಮಾರ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗ್ರಾಫಿಕ್ ಡಿಸೈನ್ ಕೆಲಸ ಮಾಡುವ ಯಲ್ಲಪ್ಪ ಅವರು ಸ್ನೇಹಿತರನ್ನು ನೋಡಲು ನಂದಿಬೆಟ್ಟದ ಕ್ರಾಸ್ಗೆ ಸ್ನೇಹಿತರ ಜೊತೆ ಕಾರಿನಲ್ಲಿ ಹೋಗಿದ್ದರು. ನಾಗರಾಜು ಎನ್ನುವವರು ಕಾರು ಚಾಲನೆ ಮಾಡುತ್ತಿದ್ದು, ಅತೀ ವೇಗದ ಚಾಲನೆಯಿಂದ ಕಾರು ರಸ್ತೆಯ ಬದಿಯ ಮೋರಿಗೆ ಬಿದ್ದು ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆದ ರಭಸಕ್ಕೆ ಯಲ್ಲಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದ ಜಿ. ಯಲ್ಲಪ್ಪ ಸೆರೆವಾಸದ ಸಮಯದಲ್ಲಿ ಜೈಲು ಜೀವಗಳು ಎಂಬ ಪುಸ್ತಕ ಬರೆದಿದ್ದರು. ಸನ್ನಡತೆಯ ಮೇಲೆ ಬಿಡುಗಡೆಯಾಗಿದ್ದ ಅವರು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು.
ಬೈಕ್ ವ್ಹೀಲಿಂಗ್- ಸ್ಥಳದಲ್ಲೇ ಯುವತಿ ಸಾವು: ಯುವಕ ಯುವತಿಯರು ಬೈಕ್ನಲ್ಲಿ ಜಾಲಿ ರೈಡ್ ಹೊರಟಿದ್ದು, ಬೈಕ್ ವ್ಹೀಲಿಂಗ್ ಮಾಡುವ ವೇಳೆ ಆಯತಪ್ಪಿ ಯುವತಿ ಕೆಳಗೆ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಕೋಲಾರ ಹೆದ್ದಾರಿಯ ಹೊಸಕೋಟೆ ತಾಲೂಕಿನ ಮೈಲಾಪುರ ಚೆನ್ನಾಪುರ ಗೇಟ್ ಬಳಿ ನಡೆದಿದೆ. ಘಟನೆಯಲ್ಲಿ ಮತ್ತೆ ಇಬ್ಬರು ಗಂಭೀರವಾಗಿ ಗಾಯಗೊಂಡು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಸುಮಾರು 20ಕ್ಕೂ ಹೆಚ್ಚು ಬೈಕ್ಗಳಲ್ಲಿ ಕೋಲಾರದ ಕಾಫಿ ಡೇ ಕಡೆ ಜಾಲಿ ರೈಡ್ ಹೊರಟಿದ್ದರು.
ಹಿಂಬದಿ ಯುವತಿ ಕುಳಿತಿದ್ದ ಬೈಕ್ ರೈಡ್ ಮಾಡುತ್ತಿದ್ದ ಯುವಕ ವ್ಹೀಲಿಂಗ್ ಮಾಡಿದ್ದು, ಮುಂದೆ ಹೋಗುತ್ತಿದ್ದ ಇನ್ನೊಂದು ಬೈಕ್ಗೆ ಗುದ್ದಿದೆ. ಬೈಕ್ನಲ್ಲಿದ್ದ ಯುವತಿ ಸೇರಿ ಮೂವರು ಕೆಳಗಡೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಒಂದು ಯುವತಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅಪಘಾತ ಆಗುತ್ತಿದ್ದಂತೆ, ಜೊತೆಗೆ ಬಂದಿದ್ದ ಯುವಕರ ಗುಂಪು ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಬೈಕ್ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಹೊಸಕೋಟೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Bike Accident : ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿ.. ಅತಿ ವೇಗಕ್ಕೆ ಎರಡು ಜೀವಗಳು ಬಲಿ, ಓರ್ವನಿಗೆ ಗಾಯ