ದೊಡ್ಡಬಳ್ಳಾಪುರ: ಮತ ಎಣಿಕೆ ಸಮಯದಲ್ಲಿ ಶಿಕ್ಷಕರು ಚಲಾಯಿಸಿದ ಅಂಚೆ ಮತ ಬಹಿರಂಗಗೊಂಡಿದ್ದು, ತಮ್ಮ ಪರವಾಗಿ ವೋಟು ಹಾಕಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕನ ಮೇಲೆ ಅಭ್ಯರ್ಥಿಯ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
ತಾಲೂಕಿನ ಅಲಪ್ಪನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಲಪ್ಪನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಹನುಮಂತರಾಯಪ್ಪ ಎಂಬುವರು ಹಲ್ಲೆಗೊಳಗಾಗಿದ್ದು, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ...ಕುಡಿತದ ಚಟ ತೀರಿಸಿಕೊಳ್ಳಲು 70 ಸಾವಿರಕ್ಕೆ ಕಂದಮ್ಮನ ಮಾರಿದ ಕಟುಕ ತಂದೆ!
ಘಟನೆ ವಿವರ: ಹನುಮಂತರಾಯಪ್ಪ ಅವರು ಅದೇ ಗ್ರಾಮದಲ್ಲಿ ತೋಟದ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಚುನಾವಣೆ ಕರ್ತವ್ಯದಲ್ಲಿದ್ದ ಅವರು, ತಮ್ಮ ಮತವನ್ನು ಅಂಚೆ ಮೂಲಕ ಮಾಡಿದ್ದರು. ಗ್ರಾಮದ ಮತಗಳ ಎಣಿಕೆ ಮುಗಿದ ನಂತರ ಅಂಚೆ ಮತವನ್ನು ಎಣಿಕೆ ಮಾಡಲಾಗಿತ್ತು. ಇದರಿಂದ ಹನುಮಂತರಾಯಪ್ಪ ಯಾರಿಗೆ ಮತ ಹಾಕಿದ್ದಾರೆ ಎಂಬುದು ಅಭ್ಯರ್ಥಿಗಳಿಗೆ ಗೊತ್ತಾಗಿದೆ. ಒಂದು ಅಂಚೆ ಮತ ಮಾತ್ರ ಇತ್ತು.
ತಮಗೆ ಮತಹಾಕಿಲ್ಲವೆಂಬ ದ್ವೇಷದಿಂದ ಅಭ್ಯರ್ಥಿಯ ಬೆಂಬಲಿಗರು ಶಿಕ್ಷಕರನ್ನು ಶಾಲೆ ಬಳಿ ಕರೆಸಿಕೊಂಡು ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಶಿಕ್ಷಕನ ಮೇಲೆ ನಡೆಸಿದ ಹಲ್ಲೆಯನ್ನು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜೈಕುಮಾರ್ ಖಂಡಿಸಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಇನ್ಮುಂದೆ ಅಂಚೆ ಮತಗಳನ್ನು ಎಲ್ಲಾ ಮತಗಳೊಂದಿಗೆ ಮಿಶ್ರಣ ಮಾಡಿ ಎಣಿಕೆ ಮಾಡುವಂತೆ ಮನವಿ ಮಾಡಿದರು.