ನೆಲಮಂಗಲ: ದಾರಿ ಹೋಕರ ಸೋಗಿನಲ್ಲಿ ಅಲೆದಾಡುತ್ತಿದ್ದ ಗ್ಯಾಂಗ್‌ವೊಂದು ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಹಣ ಎಗರಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ಓರ್ವ ಮಹಿಳೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದಾಳೆ. ಬಳಿಕ ಪೊಲೀಸರ ಅತಿಥಿಯೂ ಆಗಿದ್ದಾಳೆ.
ಬೆಂಗಳೂರು ಉತ್ತರ ತಾಲೂಕು ಚಿಕ್ಕಬಿದುರಕಲ್ಲು ಗ್ರಾಮದಲ್ಲಿ ಘಟನೆ ನಡೆದಿದೆ. ಚಿಕ್ಕಬಿದುರಕಲ್ಲು ಗ್ರಾಮದ ಕವಿತಾ ನಿನ್ನೆ ಸಂಜೆ ಪಕ್ಕದ ಮನೆಗೆ ಹೋಗಿದ್ದಾಗ ಆರು ಜನರ ತಂಡ ಏಕಾಏಕಿ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ ಪರ್ಸ್‌ನಲ್ಲಿ 1 ಲಕ್ಷದ 90 ಸಾವಿರ ಹಣ ಇತ್ತು. ಅದರಲ್ಲಿ 50 ಸಾವಿರ ಹಣಕ್ಕೆ ಕೈಹಾಕಿ ಪರಾರಿಯಾಗ್ತಿದ್ರು. ಈ ವೇಳೆ ಆರು ಜನರಲ್ಲಿ ಓರ್ವ ಮಹಿಳೆ ಸಿಕ್ಕಿಬಿದ್ದಿದ್ದು ಆಕೆಗೆ ಧರ್ಮದೇಟು ಕೊಟ್ಟಿದ್ದಾರೆ.
ಕಳ್ಳರ ತಂಡದ ಆರು ಜನರು ಮಹಾರಾಷ್ಟ್ರದ ಪುಣೆ ಮೂಲದವರು. ಸಿಕ್ಕಿಬಿದ್ದ ಮಹಿಳೆಯನ್ನು ಸೋನು ಎಂದು ಗುರುತಿಸಲಾಗಿದೆ. ಮಕ್ಕಳನ್ನು ಕಂಕುಳದಲ್ಲಿ ಎತ್ತಿಕೊಂಡು ಏರಿಯಾಗಳಲ್ಲಿ ತಿರುಗಾಡುತ್ತಾ, ಮನೆಯಲ್ಲಿ ಯಾರೂ ಇರದ ಸಂದರ್ಭದಲ್ಲಿ ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಪೈಕಿ ಐವರು ಪರಾರಿಯಾಗಿದ್ದು, ಓಡಿಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಪರಾರಿಯಾಗಿರುವ ಐವರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ತುಮಕೂರು ಅಪರಾಧ ಸುದ್ದಿ: ಇಬ್ಬರು ವ್ಯಕ್ತಿಗಳು ಕರ್ತವ್ಯನಿರತ ಇಬ್ಬರು ಪೊಲೀಸರ ಕೈಯಲ್ಲಿದ್ದ ಲಾಠಿ ಕಿತ್ತುಕೊಂಡು ಹಲ್ಲೆ ನಡೆಸಿರುವ ಘಟನೆ ಕಳೆದ ರಾತ್ರಿ ಕುಣಿಗಲ್ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ಗ್ರಾಮಲೆಕ್ಕಿಗ ಸೇರಿದಂತೆ ಇಬ್ಬರು ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ಗಳಾದ ಮಿಥುನ್, ಸುಮನ್ ಅವರ ಮೇಲೆ ಹೌಸಿಂಗ್ ಬೋರ್ಡ್ ಕಾಲೊನಿ ನಿವಾಸಿಗಳಾದ ಗ್ರಾಮಲೆಕ್ಕಿಗ ವೆಂಕಟೇಶ್ ಹಾಗೂ ರಾಮಚಂದ್ರ ಹಲ್ಲೆ ಮಾಡಿರುವ ವ್ಯಕ್ತಿಗಳು ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಕಳೆದ ರಾತ್ರಿ ಸುಮಾರು 11.45ಕ್ಕೆ ಪೊಲೀಸ್ ಕಾನ್ಸ್ಟೆಬಲ್ಗಳಾದ ಮಿಥನ್ ಹಾಗೂ ಸುಮನ್ ಹೌಸಿಂಗ್ ಬೋರ್ಡ್ ಸ್ಟೆಲ್ಲಾ ಮೆರೀಸ್ ಸ್ಕೂಲ್ ರಸ್ತೆಯಲ್ಲಿನ ಮೋದಿ ಕೇರ್ ಅಂಗಡಿಯ ಮುಂಭಾಗದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಅಲ್ಲೇ ಎದುರಿನ ಮನೆ ಮೇಲಿದ್ದ ಇಬ್ಬರು ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ಕಾನ್ಸ್ಟೆಬಲ್ಗಳನ್ನು ನೋಡಿ ಯಾರೋ ನೀವು ಮೋದಿ ಕೇರ್ ಮುಂದೆ ಸೆಲ್ಫಿ ಪೋಟೊ ತೆಗೆದುಕೊಳ್ಳುತ್ತೀರಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೂಗಾಡಿದ್ದಾರೆ. ಬಳಿಕ ಕಾನ್ಸ್ಟೆಬಲ್ಗಳು, ನಾವು ಪೊಲೀಸರು ರಾತ್ರಿ ಗಸ್ತಿಗಾಗಿ ಬಂದಿದ್ದೇವೆ. ನಮ್ಮ ಹಾಜರಾತಿಗಾಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೂಡಲೇ ಆ ಇಬ್ಬರು ಮನೆಯಿಂದಿಳಿದು ಬಂದು ಕುಣಿಗಲ್‌ನಲ್ಲಿ ಇರುವ ಎಲ್ಲಾ ಮೋದಿ ಕೇರ್ ಮುಂದೆಯೂ ಸೆಲ್ಫಿ ಪೋಟೋ ತೆಗೆದುಕೊಳ್ಳುತ್ತೀರಾ ಎಂದು ಏರುಧ್ವನಿಯಲ್ಲಿ ಕೂಗಾಡಿ ಸಮವಸ್ತ್ರದಲ್ಲಿದ್ದ ಇಬ್ಬರು ಕಾನ್ಸ್ಟೆಬಲ್ಗಳ ಮೇಲೆ ಕೈಯಿಂದ ಹಲ್ಲೆ ನಡೆಸಿರುವುದಲ್ಲದೆ ಕಾನ್ಸ್ಸ್ಟೆಬಲ್ ಕೈಯಲ್ಲಿದ್ದ ಲಾಠಿ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ಮೊಬೈಲ್ ಕಿತ್ತುಕೊಂಡು ಹಾಳು ಮಾಡಿದ್ದಾರೆ.
ಮಿಥುನ್ ಠಾಣೆಗೆ ನೀಡಿರುವ ದೂರಿನಲ್ಲಿ, ಘಟನೆಯಲ್ಲಿ ನನಗೆ ಗಾಯವಾಗಿದೆ. ಕಾನ್ಸ್ಟೆಬಲ್ ಸುಮನ್ ತಕ್ಷಣ 112ಕ್ಕೆ ಕರೆ ಮಾಡಿದ್ದು, 112 ಸಿಬ್ಬಂದಿ ಸ್ಥಳಕ್ಕೆ ಬಂದು ಜಗಳ ಮಾಡುತ್ತಿದ್ದವರಿಂದ ಕಾನ್ಸ್ಟೆಬಲ್ಗಳನ್ನು ಬಿಡಿಸಿದ್ದಾರೆ ಎಂದು ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕುಣಿಗಲ್ ಪಟ್ಟಣದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕಳ್ಳತನಕ್ಕೆ ಸಿನಿಮಾ ಪ್ರೇರಣೆ: ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಮೊಬೈಲ್ ದೋಚುತ್ತಿದ್ದ ಯುವಕರ ಬಂಧನ