ಬೆಂಗಳೂರು: ರೌಡಿಶೀಟರ್ ಕೋಳಿ ಫಯಾಜ್‌ನ ಮಗ ಪಪ್ಪುವಿನ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಕೊತ್ತನೂರು ದೊಡ್ಡ ಗುಬ್ಬಿಯಲ್ಲಿ ಈ ಘಟನೆ ಜರುಗಿದೆ. ಭಾರತಿನಗರ, ಶಿವಾಜಿನಗರದ ರೌಡಿಶೀಟರ್ ಆಗಿರುವ ಪಪ್ಪು ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ.ಈತ ಕೊಲೆ, ಕೊಲೆಯತ್ನ, ಸುಲಿಗೆ ಮಾಡಿದ್ದು, ನಗರದ 22ಕ್ಕೂ ಹೆಚ್ಚು ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಎನ್ನಲಾಗಿದೆ.
ಗಾಂಜಾ ವ್ಯಸನಿಯಾಗಿದ್ದ ಪಪ್ಪು, ಅದರ ಮತ್ತಿನಲ್ಲಿಯೇ ಏರಿಯಾದಲ್ಲಿ ಮಾರಕಾಸ್ತ್ರ ಹಿಡಿದು ಅಟ್ಟಹಾಸ ಮೆರೆಯುತ್ತಿದ್ದ. ಈ ಬಗ್ಗೆ ಸಾರ್ವಜನಿಕರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಈತನಿಗಾಗಿ ಸಿಸಿಬಿ ಪೊಲೀಸರು ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು. ಇದರಿಂದ ಹೆದರಿ ಕೊತ್ತನೂರು ದೊಡ್ಡ ಗುಬ್ಬಿಯ ರುಧ್ರಭೂಮಿಯಲ್ಲಿ ಅಡಗಿ ಕುಳಿತಿದ್ದ.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಇನ್ಸ್ಫೆಕ್ಟರ್ ಲಕ್ಷ್ಮಿಕಾಂತ್ ಹಾಗೂ ಹರೀಶ್ ಇಂದು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಪೇದೆ ಉಮೇಶ್ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಸಿಸಿಬಿ ಇನ್ಸ್ಫೆಕ್ಟರ್ ಲಕ್ಷ್ಮೀಕಾಂತ್ ಆತನಿಗೆ ಶರಣಾಗುವಂತೆ ಎಚ್ಚರಿಸಿದ್ದಾರೆ. ಇನ್ಸ್ಫೆಕ್ಟರ್ ಮಾತು ಕೇಳದೇ ತಪ್ಪಿಸಿಕೊಳ್ಳಲು ಮುಂದಾದಾಗ ಪಪ್ಪು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.