ಹೊಸಕೋಟೆ : ಐದು ಮಂದಿ ಅಂತಾರಾಜ್ಯ ಗಾಂಜಾ ಮಾರಾಟಗಾರರನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 50 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಒಡಿಶಾ ಮೂಲದ ಸತ್ಯಪ್ರಧಾನ್, ಸುರಾಂಗಿಣಿ, ಮೊನಿಪಾಲ್, ಮಿನಾಮ್ ಕರಾಡ್ ಹಾಗೂ ಆಟೋ ಡ್ರೈವರ್ ಕೃಷ್ಣ ಬಂಧಿತ ಆರೋಪಿಗಳಾಗಿದ್ದಾರೆ.
ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಲಿಬೆಲೆ ರಸ್ತೆಯಲ್ಲಿರುವ ರಾಘವೇಂದ್ರ ಚಿತ್ರಮಂದಿರದ ಬಳಿ ಹೊಸಕೋಟೆ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರಾದ ಎಸ್ ಆರ್ ಮಂಜುನಾಥ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.
ರಸ್ತೆ ಪಕ್ಕದಲ್ಲಿ ಒಡಿಶಾ ಮೂಲದ ಸತ್ಯಪ್ರಧಾನ್, ಆಟೋ ಡ್ರೈವರ್ ಕೃಷ್ಣ ಅವರು ಆಟೋವನ್ನು ನಿಲ್ಲಿಸಿಕೊಂಡು ಗಾಂಜಾವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ, ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ.
ಕಾಡಬಿಸನಹಳ್ಳಿ ಗ್ರಾಮದ ವೆಂಕಟೇಶ್ ಅವರಿಗೆ ಸೇರಿದ ಮನೆಯಲ್ಲಿ ಸುಮಾರು 3 ತಿಂಗಳಿಂದ ಆರೋಪಿಗಳು ವಾಸವಾಗಿದ್ದರು. ಅಕ್ರಮವಾಗಿ ಮಾರಾಟ ಮಾಡಲು ಮನೆಯಲ್ಲಿ ಗಾಂಜಾವನ್ನ ದಾಸ್ತಾನು ಮಾಡಲಾಗಿತ್ತು. ಒಟ್ಟು 50 ಕೆಜಿ ಗಾಂಜಾವನ್ನು ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ 3 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊ.ನಂ 344/2021ಕಲಂ 20 (ಸಿ) ಎನ್‌ಡಿಪಿಎಸ್ ರೀತ್ಯ ಕೇಸ್ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.