ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳು ಗೆಲ್ಲಲು ಹಲವು ಕಸರತ್ತುಮಾಡುತ್ತಿದ್ದಾರೆ. ಇದರಂತೆ ನಕಲಿ ವೋಟರ್ ಐಡಿ ಕಾರ್ಡ್ ಹಂಚಿಕೆ ಮಾಡುತ್ತಿದ್ದಾರೆಂಬ ಸಂಶಯದ ಮೇಲೆ ಹೊಸಹಳ್ಳಿ ಗ್ರಾಮಸ್ಥರು ಕಾರ್ಡ್ ಹಂಚಿಕೆ ಮಾಡುತ್ತಿದ್ದ ಮೂವರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ನಕಲಿ ವೋಟರ್ ಐಡಿ ಹಂಚಿಕೆ ಮಾಡುತ್ತಿದ್ದವರಿಂದ ಎಪಿಕ್ ಕಾರ್ಡ್ ಸೇರಿದಂತೆ ಕಾಗದ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇಂದು ನಕಲಿ ವೋಟರ್ ಕಾರ್ಡ್ ಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂಬ ಸಂಶಯವನ್ನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿ ಪರವಾಗಿ ನವದೊಡ್ಡಬಳ್ಳಾಪುರ ಹೆಸರಿನ ಕಾರ್ಡ್ ಹಂಚಿಕೆ ಮಾಡಲಾಗುತ್ತಿದ್ದು, ಕಾರ್ಡ್ನಲ್ಲಿ ವೋಟರ್ ಸಂಖ್ಯೆ, ಮತಪಟ್ಟಿಗೆ ಸಂಖ್ಯೆ ಇದೆ. ಕ್ಯೂಆರ್ ಕೋಡ್ ಇದ್ದು ಸಂಶಯಕ್ಕೆ ಎಡೆ ಮಾಡಿದೆ.
ಇದನ್ನೂ ಓದಿ : ಇಂದು ಸಂಜೆ ರಾಜ್ಯಾದ್ಯಂತ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಕರೆ
ಇನ್ನು ಈ ಘಟನೆ ಕುರಿತು ಮಾತನಾಡಿದ ಕೆಪಿಸಿಸಿ ಸದಸ್ಯರಾದ ಲಕ್ಷ್ಮೀಪತಿ ಅವರು ಮಾತನಾಡಿ, ಶಾಂತಿಯುಕ್ತವಾದ ನಮ್ಮ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಇಂದು ಬಿಜೆಪಿಯವರು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಾರಿನಲ್ಲಿ ಬಂದಿದ್ದ ಕಾಸರಗೋಡು ಮೂಲದ ಮೂವರು ಎಪಿಕ್ ಕಾರ್ಡ್ ಹಂಚಿಕೆ ಮಾಡುತ್ತಿದ್ದರು. ಹೀಗೆ ಪ್ರತಿ ಬೂತ್ಗೆ ಇಬ್ಬರಂತೆ ಕಾರ್ಡ್ ಹಂಚಿಕೆ ಮಾಡುತ್ತಿದ್ದು, ಈ ಕಾರ್ಡ್ನಲ್ಲಿ ಕ್ಯೂಆರ್ ಕೋಡ್ ಇರುವುದು ಕಂಡು ಬಂದಿದೆ. ಇದು ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿದೆ ಎಂದರು.
ಇದನ್ನೂ ಓದಿ : ರಾಜ್ಯದಲ್ಲೇ ಮೊಕ್ಕಾಂ ಹೂಡಿದ ಅಮಿತ್ ಶಾ: ಚುನಾವಣೆ ಗೆಲ್ಲಲು ಚಾಣಕ್ಯನ ಕೊನೆ ದಿನಗಳ ತಂತ್ರಗಾರಿಕೆ...!
ಇದರಿಂದಾಗಿ ಗ್ರಾಮಸ್ಥರೆಲ್ಲರು ಸೇರಿ ಒಂದು ಕಾರಿನಲ್ಲಿದ್ದ ಮೂವರನ್ನು ಹಿಡಿದು ಹೊಸಹಳ್ಳಿ ಪೊಲೀಸರ ವಶಕ್ಕೆ ಒಪ್ಪಿಸಿದ್ದೇವೆ. ಮತ್ತೊಂದು ಕಾರಿನಲ್ಲಿದ್ದ ನಾಲ್ವರು ಪರಾರಿಯಾಗಿದ್ದಾರೆ. ಈ ರೀತಿ ಮಾಡುತ್ತಿರುವುದರಿಂದ ಕ್ಷೇತ್ರದಲ್ಲಿ ಶಾಂತಿಯನ್ನು ಹಾಳು ಮಾಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದ್ದು, ಚುನಾವಣಾ ಅಧಿಕಾರಿಗಳಿಂದ ವಾಹನದ ಅನುಮತಿ ಪಡೆಯದೆ ಮತದಾನದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು ಎಂದು ಆರೋಪಿಸಿದರು.
ಬಳಿಕ ಹೊಸಹಳ್ಳಿ ಠಾಣೆಯ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರಿಂದ ಠಾಣೆಯ ಮುಂದೆ ಹೈಡ್ರಾಮ ನಡೆಯಿತು. ಪೊಲೀಸರು ಪಕ್ಷಪಾತ ಧೋರಣೆ ಮಾಡುತ್ತಿದ್ದಾರೆ ಎಂದು ಪೊಲೀಸರ ಆರೋಪಿಸಿದರು ಅಲ್ಲದೆ, ಆರೋಪಿಗಳ ವಿರುದ್ಧ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಇದನ್ನೂ ಓದಿ : ಕಿವಿ ಇದ್ದರೆ ಬಂದು ಹನುಮಾನ್ ಚಾಲೀಸಾ ಕೇಳಿಸಿಕೊಳ್ಳಿ.. ಸುರ್ಜೇವಾಲಗೆ ಶೋಭಾ ಕರಂದ್ಲಾಜೆ ಸವಾಲ್