ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಸರ್ಕಾರಿ ನೌಕರರ ಮುಷ್ಕರ ದಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೊರಗಡೆಯಿಂದ ಬೀಗ ಜಡಿದು ಅಧಿಕಾರಿಗಳೊಂದಿಗೆ ಶಾಸಕರು ಅಕ್ರಮ ವೆಸಗಿದ್ದಾರೆ ಎಂಬ ಆರೋಪವೂ ಸತ್ಯಕ್ಕೆ ದೂರವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಜೆಡಿಎಸ್ ಶಾಸಕ ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ದೇವನಹಳ್ಳಿಯ ಶಾಸಕರ ಗೃಹ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ದ ಯಾವುದೇ ಭ್ರಷ್ಟಾಚಾರ ಆರೋಪ ಸಿಕ್ಕಿಲ್ಲ ಅಂತ ಈ ರೀತಿ ಅಪಪ್ರಚಾರ ಮಾಡ್ತಿದ್ದಾರೆ. ಬೆಟ್ಟ ಅಗೆದು ಇಲಿ ಹಿಡಿದ ರೀತಿ ಕೆಲವರು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೊಡ್ಡ ಅವ್ಯವಹಾರವೇನು ನಡೆದಿಲ್ಲ. ನಾನು ಇಷ್ಟುದಿನ ಸುಮ್ಮನಿದ್ದೆ. ಆದರೆ ನಮ್ಮ ಕಾರ್ಯಕರ್ತರು ಪದೇ ಪದೆ ಪ್ರಶ್ನೆ ಮಾಡಿದ್ದಕ್ಕೆ ಇಂದು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಭೂ ಮಾಲೀಕರು ತಿದ್ದುಪಡಿ ಬೇಗ ಮಾಡಿಕೊಳ್ಳಬೇಕು ಎಂದು ಕರೆದಿದ್ದರು ಹಾಗಾಗಿ ಹೋಗಿದ್ದೆನು. ಜಂಟಿ ವಿಭಾಗದಲ್ಲಿ ನನ್ನ ಸ್ವತ್ತು ಎ ಬದಲು ಸಿ ಆಗಿ ಬದಲಾಗಿತ್ತು. ಹೀಗಾಗಿ ಅದನ್ನು ಬದಲಾವಣೆ ಮಾಡಲು ಅಂದು ನಾನು ಅವರನ್ನ ಕರೆದುಕೊಂಡು ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದ್ರೆ 1 ನೇ ತಾರೀಖು ಸರ್ಕಾರಿ ನೌಕರರ ಪ್ರತಿಭಟನೆ ಇದ್ದರೆ ಮಹಿಳೆಯರ ಪೊಟೋ ತೆಗೆದು ಕಳುಹಿಸಿ ಅಂತ ಸಬ್ ರಿಜಿಸ್ಟ್ರಾರ್ ಕೇಳಿದ್ದೆನು. ಅದಕ್ಕೆ ಸಬ್ ರಿಜಿಸ್ಟ್ರಾರ್ ಒಪ್ಪಿಗೆ ಕೊಟ್ಟು, ಬನ್ನಿ ಅಂತ ಕರೆದಿದ್ದಕ್ಕೆ ಹೋಗಿದ್ದೆನು. ಮಾಧ್ಯಮಗಳ ಕ್ಯಾಮೆರಾ ಕಂಡಾಗ ನನಗೆ ಬೀಗ ಹಾಕಿರುವುದು ಗೊತ್ತಾಯ್ತು, ಕೂಡಲೇ ಬಾಗಿಲು ತೆಗೆಯುವಂತೆ ಕೇಳಿದೆ, ಆದರೆ ಕೆಲವರು ತೆಗೆಯಲು ಬಿಡಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೇ ಶಾಸಕರು ವಿಧಾನಸೌಧದ ಭವನಗಳನ್ನು ಬರೆಸಿಕೊಂಡಂತೆ ಕೆಲವರು ಮಾತನಾಡುತ್ತಿದ್ದಾರೆ. ಕ್ಷೇತ್ರದ ಜನರಿಗೆ ನನ್ನ ಬಗ್ಗೆ, ನನ್ನ ಯೋಗ್ಯತೆ ಬಗ್ಗೆ ಗೊತ್ತಿದೆ. ಕಳ್ಳತನ ಮಾಡಿ ಯಾಮಾರಿಸಿ ಮೋಸ ಮಾಡಿ ಬದುಕುವ ಅವಶ್ಯಕತೆ ನನಗಿಲ್ಲ. ಸುಳ್ಳು ಆಪಾದನೆಗಳನ್ನ ಮಾಡಿ ಜನರ ದಿಕ್ಕು ತಪ್ಪಿಸಬಹುದು ಅಂತ ಅಂದುಕೊಂಡಿದ್ದಾರೆ. ನಾನು ನಿಷ್ಕಳಂಕ ವ್ಯಕ್ತಿ ಎಂದು ನಿಸರ್ಗ ನಾರಾಯಣಸ್ವಾಮಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಲೋಕಾಯುಕ್ತಕ್ಕೆ ದೂರು: ಲೋಕಾಯುಕ್ತ ಇಲಾಖೆಗೆ ಕೇಸ್ ಕೊಟ್ಟಿರೋ ಬಗ್ಗೆ ಪ್ರತಿಕ್ರಿಯೆಸಿದ ಅವರು, ನನ್ನ ಬಗ್ಗೆ ಖರಾಬು ಕಾಲುವೆಗಳನ್ನು ಒತ್ತುವರಿ ಮಾಡಿರುವ ಕುರಿತಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆ ಬಗ್ಗೆ ತನಿಖೆ ಮಾಡಲಿ. ಅಂಥ ಕೆಲಸ ಮಾಡುವ ಅವಶ್ಯಕತೆ ನನಗಿಲ್ಲ. ನನ್ನ ವಿರುದ್ದ ಆರೋಪ ಮಾಡ್ತಿರುವವರು ತಮ್ಮ ಬೆನ್ನನ್ನು ಒಮ್ಮೆ ನೋಡಿಕೊಳ್ಳಲಿ. ನನ್ನ ರಾಜಕೀಯ ಬೆಳವಣಿಗೆಯ ಏಳಿಗೆ ಸಹಿಸಲಾಗದೇ ಕೆಲವರು ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ,ನನ್ನ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂಓದಿ:ಎಸ್ಡಿಪಿಐ ಕಾಂಗ್ರೆಸ್ ನಡುವಿನ ರಾಜಕೀಯ ಒಪ್ಪಂದದ ಕುರಿತು ತನಿಖೆಯಾಗಬೇಕು: ಶೋಭಾ ಕರಂದ್ಲಾಜೆ