ಆನೇಕಲ್ : ತಾಲೂಕಿನ ಸೊಣ್ಣನಾಯಕನಪುರ ಸರ್ವೆ ನಂ. 46/1ರಲ್ಲಿ 5 ಎಕರೆ ಜಮೀನಿನ ತತ್ಕಾಲ್ ಪೋಡಿ ಮಾಡಿಸಲು ಲಂಚ ಸ್ವೀಕಾರ ಮಾಡುತ್ತಿದ್ದ ಭೂ ಮೋಜಣಿದಾರ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಆನೇಕಲ್ ತಾಲೂಕು ಕಚೇರಿಯ ಭೂ ಮಾಪನ ಇಲಾಖಾ ಕಚೇರಿಯಲ್ಲಿ ಪರವಾನಿಗೆ ಹೊಂದಿದ ಸರ್ವೆಯರ್ ರತ್ನ ಕುಮಾರ್ ಒಂದೂವರೆ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾನೆ.
ಆದರೆ, ಸೊಣ್ಣನಾಯಕನಪುರ ಸರ್ವೆ ನಂ. 46/1ರಲ್ಲಿ 5 ಎಕರೆ ಜಮೀನಿನ ತತ್ಕಾಲ್ ಪೋಡಿ ಮಾಡಿಸಲು ಹತ್ತು ದಿನಗಳ ಹಿಂದೆ ಹಾರಗದ್ದೆಯ ಹೆಚ್.ಆರ್ ಪ್ರದೀಪ್ ಎಂಬುವರು ಭೂಮಾಪನ ಇಲಾಖೆಗೆ ಶುಲ್ಕ ಪಾವತಿಸಿದ್ದರು. ಬಳಿಕ ನಿಯಮಗಳ ಪ್ರಕಾರ ವಾರದ ನಂತರ ರತ್ನ ಕುಮಾರ್ ಜಮೀನಿನ ಬಳಿ ಬಂದಿದ್ದು, ಈ ವೇಳೆ 25 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾನೆ.
ಹೀಗೆ ಲಂಚಕ್ಕೆ ಬೇಡಿಕೆ ಇಟ್ಟದ್ದನ್ನ ಯಥಾವತ್ತಾಗಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳಕ್ಕೆ ಸಾಕ್ಷಿ ಸಮೇತ ಪ್ರದೀಪ್ ದೂರು ನೀಡಿದ್ದಾರೆ.
ಬಳಿಕ ಪೊಲೀಸರ ಸಲಹೆಯಂತೆ ದೂರುದಾರ ಬೆಂಗಳೂರು-ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ಖಾಸಗಿ ಹೋಟೆಲ್ಗೆ ರತ್ನಕುಮಾರ್ನನ್ನು ಕರೆದು ₹25 ಸಾವಿರ ನೀಡಿದ್ದಾನೆ. ಲಂಚ ಪಡೆದುಕೊಳ್ಳುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಇದೇ ಜಮೀನಿಗೆ ಸಂಬಂಧಿಸಿದಂತೆ ಸೂರ್ಯನಗರದ ಇನ್ನಿಬ್ಬರು ಸಿಬ್ಬಂದಿ 2017ರಲ್ಲಿ ಎಸಿಬಿ ಬಲೆಗೆ ಬಿದ್ದಿದ್ದನ್ನು ನೆನಪಿಸಿಕೊಳ್ಳಬಹುದು.