ನೆಲಮಂಗಲ : ಪವನ ವಿದ್ಯುತ್ ಯಂತ್ರದ ರೆಕ್ಕೆಗಳನ್ನ ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿಂಡ್ ಪವರ್ ರೆಕ್ಕೆಗಳು ಹಿಂದಿದ್ದ ಲಾರಿಯ ಮುಂಭಾಗದಿಂದ ತೂರಿ ಹೊರ ಬಂದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ದಾಬಸ್ ಪೇಟೆ ಹಾಗೂ ದೊಡ್ಡಬಳ್ಳಾಪುರ ರಸ್ತೆಯ ಪೆಮ್ಮನಹಳ್ಳಿಯ ರಾಮ್ಕಿ ಕಾರ್ಖಾನೆಯ ಮುಂಭಾಗ ಈ ಅಪಘಾತ ಸಂಭವಿಸಿದೆ. ಎಲ್ಎಂ ಕಂಪನಿಗೆ ಸೇರಿದ ಲಾರಿಯು ವಿಂಡ್ ಪವರ್ ರೆಕ್ಕೆಗಳನ್ನು ಸಾಗಿಸುತ್ತಿದ್ದ ವೇಳೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ರೆಕ್ಕೆಗಳು ಲಾರಿಯ ಮುಂಭಾಗದಿಂದ ತೂರಿ ಹೊರ ಬಂದಿವೆ. ಅಪಘಾತದ ದೃಶ್ಯ ಭಯಾನವಾಗಿದ್ದು, ಸ್ಥಳೀಯರನ್ನು ದಂಗು ಬಡಿಸಿದೆ.
ಪವನ ವಿದ್ಯುತ್ ತಯಾರಿಕೆಗಾಗಿ ಬಳಕೆ ಮಾಡುವ ಭಾರಿ ಉದ್ದನೆಯ ರೆಕ್ಕೆಗಳು ಇವಾಗಿದ್ದರಿಂದ ದೊಡ್ಡಬಳ್ಳಾಪುರ ಹಾಗೂ ದಾಬಸ್‌ಪೇಟೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಅಪಘಾತ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.