ನೆಲಮಂಗಲ : ಹಾಡಹಗಲೇ ತೋಟದಲ್ಲಿದ್ದ ಕೋಳಿ ಶೆಡ್ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿಯಿಂದ ಶೆಡ್ನಲ್ಲಿದ್ದ ನೂರಕ್ಕೂ ಹೆಚ್ಚು ನಾಟಿ ಕೋಳಿಗಳು ಸಾವನ್ನಪ್ಪಿವೆ.
ನೆಲಮಂಗಲ ತಾಲೂಕಿನ ಬಾಪೂಜಿ ನಗರದ ರಾಜೇಶ್ ಎಂಬುವರ ತೋಟದಲ್ಲಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ತೋಟದ ಮನೆಯಲ್ಲಿದ್ದ ಕೋಳಿ ಶೆಡ್ ಮೇಲೆ ಚಿರತೆ ದಾಳಿ ಮಾಡಿದೆ. ಕೋಳಿಗಳ ಚಿರಾಟ ಕೇಳಿ ಶೆಡ್ ಬಳಿ ಜನರು ಬಂದಾಗ ಚಿರತೆ ಓಡಿ ಹೋಗಿದೆ. ತೋಟದ ಪಕ್ಕದ ನೀಲಗಿರಿ ತೋಪಿನಲ್ಲಿ ಚಿರತೆ ಅವಿತುಕೊಂಡಿದೆ ಎಂದು ತೋಟದ ಮಾಲೀಕ ರಾಜೇಶ್ ಹೇಳಿದ್ದಾರೆ.
ಶೆಡ್ನಲ್ಲಿ ನೂರೈವತ್ತಕ್ಕೂ ಹೆಚ್ಚು ನಾಟಿ ಕೋಳಿಗಳನ್ನ ಸಾಕಲಾಗಿತ್ತು. ಚಿರತೆ ದಾಳಿಯಿಂದ ನೂರಕ್ಕೂ ಹೆಚ್ಚು ನಾಟಿ ಕೋಳಿಗಳು ಸಾವನ್ನಪ್ಪಿವೆ. ಹಾಡಹಗಲೇ ಚಿರತೆ ದಾಳಿ ಮಾಡಿರೋದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ತೋಟ ಮತ್ತು ಹೊಲಗಳಿಗೆ ರಾತ್ರಿ ವೇಳೆ ಹೋಗಲು ಹೆದರುತ್ತಿದ್ದ ಜನರು ಈಗ ಹಗಲಲ್ಲೇ ತೋಟಗಳಿಗೆ ಹೋಗಲು ಹೆದರುವಂತಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಪಕ್ಕದ ಕೆರೆಕೆತ್ತಿಗನೂರಿನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈ ಪ್ರದೇಶದಲ್ಲಿ ಮೂರಕ್ಕೂ ಹೆಚ್ಚು ಚಿರತೆಗಳು ವಾಸವಾಗಿವೆ. ಅರಣ್ಯ ಇಲಾಖೆ ಚಿರತೆಗಳನ್ನ ಸೆರೆ ಹಿಡಿದು ಗ್ರಾಮಸ್ಥರ ಆತಂಕವನ್ನ ದೂರ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಮೈಸೂರು: ನಂಜನಗೂಡಿನಲ್ಲಿ ಚಿರತೆ ಪ್ರತ್ಯಕ್ಷ.. ಇನ್ನೊಂದೆಡೆ ಕರು ಮೇಲೆ ದಾಳಿ
ನಂಜನಗೂಡಿನಲ್ಲಿ ಚಿರತೆ ಪ್ರತ್ಯಕ್ಷ( ಮೈಸೂರು) : ಮೈಸೂರು ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದೆ ಇಲ್ಲಿನ ನಂಜನಗೂಡು ತಾಲೂಕಿನ ಶೆಟ್ಟಹಳ್ಳಿ ಮತ್ತು ದುಗ್ಗಹಳ್ಳಿ ರಸ್ತೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿತ್ತು. ಕಾರಿನಲ್ಲಿ ತೆರಳುತ್ತಿದ್ದ ಮನು ಎಂಬವರು ಚಿರತೆ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯವನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ತಿಳಿದ ಶೆಟ್ಟಹಳ್ಳಿ ಮತ್ತು ದುಗ್ಗಹಳ್ಳಿ ಗ್ರಾಮಸ್ಥರು ಆತಂಕಗೊಂಡಿದ್ದರು.
ಕರು ತಿಂದು ಹಾಕಿದ ಚಿರತೆ ( ತಿ ನರಸೀಪುರ): ಜಮೀನಿನಲ್ಲಿ ಮೇಯುತ್ತಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ತಿಂದು ಹಾಕಿರುವ ಘಟನೆ ಜಿಲ್ಲೆಯ ತಿ. ನರಸೀಪುರ ತಾಲೂಕಿನ ಹಳೆ ಕುಕ್ಕೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಸಿಕಂದರ್ ಪಾಷಾ ಎಂಬವರಿಗೆ ಸೇರಿದ ಕರುವನ್ನು ಚಿರತೆ ತಿಂದು ಹಾಕಿತ್ತು. ಚಿರತೆ ದಾಳಿಯಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದರು.