ನೆಲಮಂಗಲ: ತಾಲೂಕಿನ ಡಾಬಸ್ ಪೇಟೆಯಲ್ಲಿರುವ ಮಾರುತಿ ಸುಜುಕಿ ಕಾರ್ಖಾನೆ ಏಕಾಏಕಿ 46 ಕಾರ್ಮಿಕರನ್ನ ಕೆಲಸದಿಂದ ವಜಾ ಮಾಡಿದೆ ಎಂದು ಆರೋಪಿಸಲಾಗಿದೆ. ಇದೇ ವೇಳೆ, ಸಂಕಷ್ಟಕ್ಕೀಡಾಗಿರುವ ಕಾರ್ಮಿಕರು ಕಾರ್ಖಾನೆ ಮುಂಭಾಗ ಶಾಂತಿಯುತ ಪ್ರತಿಭಟನೆ ನಡೆಸಿದರು
ಸಿಐಟಿಯು ಕಾರ್ಮಿಕ ಸಂಘಟನೆ ಕಾರ್ಮಿಕರ ಬೆಂಬಲಕ್ಕೆ ನಿಂತಿದೆ. ಈ ವೇಳೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜು ಮಾತನಾಡಿ, ಕೊರೊನಾ ಹಿನ್ನೆಲೆ ಮಾರುತಿ ಸುಜುಕಿ ಕಾರ್ಖಾನೆ 46 ಜನ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿರುವುದು ಸರಿಯಲ್ಲ. ಕಾರ್ಮಿಕ ಸಂಘಟನೆಗೆ ಸೇರುತ್ತಾರೆ ಎನ್ನುವ ಕಾರಣಕ್ಕೆ ಆಡಳಿತ ಮಂಡಳಿ ಹಾಗೂ ಭರತ್ ಎಂಟರ್ ಪ್ರೈಸಸ್ ಮಾಲೀಕ ತೆಗೆದುಕೊಂಡಿರುವ ನಿರ್ಧಾರ ಸರಿಯಲ್ಲ. ಕೂಡಲೇ ಇವರನ್ನು ಕೆಲಸಕ್ಕೆ ತೆಗೆದುಕೊಳ್ಳದೇ ಇದ್ದರೆ ಸಿಐಟಿಯು ಸಂಘಟನೆ ವತಿಯಿಂದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದರು.
ಕಾರ್ಮಿಕರ ಶಾಂತಿಯುತ ಪ್ರತಿಭಟನೆ ತಿಳಿಯುತ್ತಿದ್ದಂತೆ ನೆಲಮಂಗಲ ಕಾರ್ಮಿಕ ಅಧಿಕಾರಿ ನಾಗರತ್ನಮ್ಮ ಸ್ಥಳಕ್ಕೆ ಭೇಟಿ ನೀಡಿದರು. ಆಡಳಿತ ಮಂಡಳಿಯ ನಡುವೆ ಮಾತುಕತೆಗೆ ಕರೆ ಮಾಡಿದಾಗ ಕಾರ್ಖಾನೆ ಮಾಲೀಕರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ ಹಿನ್ನೆಲೆ ಕಾರ್ಮಿಕರಿಂದ ಮನವಿ ಪತ್ರವನ್ನು ಪಡೆದು ಮುಂದಿನ ಕ್ರಮವನ್ನು ತೆಗೆದುಕೊಳ್ಳುವ ಭರವಸೆ ನೀಡಿದರು.