ಹೊಸಕೋಟೆ/ಬೆಂಗಳೂರು ಗ್ರಾಮಾಂತರ : ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ರಕ್ತಚಂದನ ಸಾಗಿಸಿ ತೋಟದಲ್ಲಿ ದಾಸ್ತಾನು ಮಾಡಿ ಬರುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕಟ್ಟಿಗೇನಹಳ್ಳಿಯ ತೋಪಿನಲ್ಲಿ ಇರಿಸಿ ಕಾರಿನಲ್ಲಿ ವಾಪಸ್ ಬರುತ್ತಿದ್ದಿದ್ದನ್ನು ಗಮನಿಸಿ ಸಾರ್ವಜನಿಕರು ಪೊಲೀಸರಿಗೆ ನೀಡಿದ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ, 3 ಲಕ್ಷ ರೂ. ಮೌಲ್ಯದ ರಕ್ತ ಚಂದನವನ್ನು ವಶ ಪಡಿಸಿಕೊಂಡಿದ್ದಾರೆ.
ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ರಕ್ತಚಂದನವನ್ನು ಕಾರಿನಲ್ಲಿ ತಂದು, ಕಟ್ಟಿಗೇನಹಳ್ಳಿಯ ತೋಪಿನಲ್ಲಿ ಇರಿಸಿ ವಾಪಸ್ ಹೋಗುತ್ತಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿದೆ. ಡಿವೈಎಸ್ಪಿ ನಿಂಗಪ್ಪ ಬಸಪ್ಪ ಸಕ್ರಿ ನೇತೃತ್ವದ ತಂಡ ಕಾರನ್ನು ಅಡ್ಡಗಟ್ಟಿ ವಿಚಾರಣೆ ನಡೆಸಿದಾಗ ರಕ್ತ ಚಂದನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವರಾದ ಅಜಿಜ್ (28),ಖಾದರ್(32) ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಇಳಿಸಿ ಬಂದಿದ್ದ ರಕ್ತ ಚಂದನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.