ದೇವನಹಳ್ಳಿ: ದೇಶದಲ್ಲಿ ಹೊಸ ಕೊರೊನಾ ರೂಪಾಂತರಿ ಬಿಎಫ್ 7 ಆತಂಕ ಹಿನ್ನೆಲೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಈಗಾಗಲೇ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿ ಕೆಲಸ ಮಾಡುತ್ತಿದೆ.
19 ಜನರಿಗೆ ಪಾಸಿಟಿವ್: ವಿದೇಶದಿಂದ ಬರುತ್ತಿರುವ ಪ್ರಯಾಣಿಕರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ಟಿಪಿಸಿಆರ್ ಟೆಸ್ಟಿಂಗ್ ಮಾಡಲಾಗುತ್ತಿದೆ. ಇತ್ತೀಚೆಗೆ (ನವೆಂಬರ್ 27) ಟೆಸ್ಟಿಂಗ್ ಮಾಡಿದವರ ಪೈಕಿ ಇದುವರೆಗೂ ಒಟ್ಟು 19 ಜನರ ವರದಿ ಪಾಸಿಟಿವ್ ಎಂದು ಬಂದಿದೆ. ಪಾಸಿಟಿವ್ ಬಂದ ಪ್ರಯಾಣಿಕರ ಮೇಲೆ ಈಗಾಗಲೇ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಎಲ್ಲರಿಗೂ ಹೋಂ ಕ್ವಾರಂಟೈನ್ ಆಗುವಂತೆ ಸೂಚನೆ ನೀಡಿ, ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ ಎಂದು ಬೆಂಗಳೂರು ಗ್ರಾಮಾಂತರ ಡಿಹೆಚ್ಒ ವಿಜಯೇಂದ್ರ ತಿಳಿಸಿದ್ದಾರೆ.
ಕಳೆದ ಎರಡು ದಿನದಲ್ಲಿ 7 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಹೈರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಮತ್ತಷ್ಟು ಕೇಸ್ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಇಂಟರ್ ನ್ಯಾಷನಲ್ ಅರೈವಲ್ ಮುಂಭಾಗ ಇನ್ನಷ್ಟು ಟೆಸ್ಟ್ ಸೆಂಟರ್ಗಳನ್ನ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ವಿದೇಶದಿಂದ ಬಂದ ವ್ಯಕ್ತಿಗೆ ಕೊರೊನಾ: ಇನ್ನೂ ಶಿವಮೊಗ್ಗದಲ್ಲಿ ಹಲವು ತಿಂಗಳುಗಳ ನಂತರ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ. ಕಳೆದ 4 ದಿನಗಳ ಹಿಂದೆ ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದೆ. ಅವರನ್ನು ಹೋಮ್ ಐಸೋಲೇಷನ್ಗೆ ಒಳಪಡಿಸಲಾಗಿದ್ದು, ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಬಿಹಾರಕ್ಕೆ ಬಂದ ವಿದೇಶಿಗರಲ್ಲಿ ಕೊರೊನಾ: ಬಿಹಾರದ ಗಯಾ ವಿಮಾನ ನಿಲ್ದಾಣದಲ್ಲಿ ಆರ್‌ಟಿ - ಪಿಸಿಆರ್ ಪರೀಕ್ಷೆ ನಡೆಸಿದ ನಂತರ 11 ವಿದೇಶಿ ಪ್ರಜೆಗಳಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ಎಲ್ಲರನ್ನೂ ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ನಾಲ್ವರು ಮ್ಯಾನ್ಮಾರ್, ಥಾಯ್ಲೆಂಡ್ ಮತ್ತು ಇಬ್ಬರು ಇಂಗ್ಲೆಂಡ್ ದೇಶದಿಂದ ಬಂದವರಿದ್ದಾರೆ.
ಬೌದ್ಧರ ತೀರ್ಥಯಾತ್ರೆಯ ಪ್ರಮುಖ ಕ್ಷೇತ್ರ ಬೋಧಗಯಾವು ಪ್ರತಿ ವರ್ಷ ಬೋಧ ಮಹೋತ್ಸವ ಆಯೋಜಿಸುತ್ತಿದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಇವರು ಬಂದಿದ್ದರು. ಪ್ರಪಂಚದಾದ್ಯಂತ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ.
ಗಯಾ ಜಿಲ್ಲಾ ಉಸ್ತುವಾರಿ ವೈದ್ಯಾಧಿಕಾರಿ ಡಾ.ರಂಜನ್ ಸಿಂಗ್ ಅವರು ಹೇಳುವ ಪ್ರಕಾರ, ಇವರಿಗೆ ಬಾಧಿಸಿದ ಕೋವಿಡ್ ಪ್ರಕರಣಗಳು ಗಂಭೀರವಾಗಿಲ್ಲ. ಅಧಿಕಾರಿಗಳು ರೋಗ ಹರಡುವುದನ್ನು ತಪ್ಪಿಸಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದೇಶದಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿಗೆ ಕೋವಿಡ್ ಪಾಸಿಟಿವ್: ಇಬ್ಬರು ಹೋಂ ಐಸೋಲೇಷನ್