ಬಾಗಲಕೋಟೆ: ಸಲೂನ್‌ವೊಂದರಲ್ಲಿ ಸೇರಿದ ಗೆಳೆಯರು ಪರಸ್ಪರ ತಮಾಷೆ ಮಾಡುತ್ತಾ ಅದರಲ್ಲೊಬ್ಬ ಕತ್ತರಿಯನ್ನು ಎದೆಗಿರಿದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ. ಆಸಂಗಿ ಗ್ರಾಮದ ಸಲೂನ್ ಅಂಗಡಿ ಮಾಲೀಕ ಸದಾಶಿವ ಅಣ್ಣಪ್ಪ ನಾವಿ(19) ಮೃತ ವ್ಯಕ್ತಿ.
ಈತನ ಗೆಳೆಯರು ಸಲೂನ್ ಅಂಗಡಿಯಲ್ಲಿ ಕುಳಿತು ಹರಟೆ, ಕುಚೇಷ್ಟೆ ಮಾಡುವುದು ಸಹಜವಾಗಿತ್ತು. ಎಂದಿನಂತೆ ಗಾರೆ ಕೆಲಸ ಮಾಡುವ ಹುಡುಗರು ಅಲ್ಲಿ ಸೇರಿದ್ದರು. ಆದರೆ, ವ್ಯಕ್ತಿಯೋರ್ವನ ಹೇರ್ ಕಟಿಂಗ್ ಮಾಡುವ ವೇಳೆ ಸಾಗರ ಸೀನಪ್ಪ ಅವಟಿ(23) ಎಂಬಾತ ಕುಚೇಷ್ಟೆ ಮಾಡುತ್ತಲೇ ಕೈಯಲ್ಲಿದ್ದ ಕತ್ತರಿಯನ್ನೇ ಎದೆಗೆ ಇರಿದಿದ್ದಾನೆ. ಪರಿಣಾಮ ಹೃದಯಭಾಗಕ್ಕೆ ತೀವ್ರ ಗಾಯವಾಗಿದ್ದರಿಂದ ಸದಾಶಿವ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ನಂತರ ರಬಕವಿ-ಬನಹಟ್ಟಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಮೃತ ದುರ್ದೈವಿ ಉತ್ತಮ ಕಬಡ್ಡಿ ಆಟಗಾರ ಹಾಗೂ ಕ್ರಿಕೆಟ್ ಪಟು ಆಗಿದ್ದ. ಕುಚೇಷ್ಟೆಯಲ್ಲಿ ತೊಡಗುವ ಗೆಳೆಯರಿಗೆ ಈ ಘಟನೆಯಿಂದ ದಿಗ್ಭ್ರಮೆಯಾಗಿದ್ದು ಮಾನಸಿಕ ಸ್ಥಿಮಿತ ಕಳೆದುಕೊಂಡಲ್ಲಿ ಹೀಗೂ ಆಗುವ ಸಂಭವ ಉಂಟು ಅನ್ನೋದಕ್ಕೆ ಇದೊಂದು ಘಟನೆ ಸಾಕ್ಷಿ.
ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜಮಖಂಡಿ ಡಿವೈಎಸ್ಪಿ ಪಾಂಡುರಂಗಯ್ಯ, ಸಿಪಿಐ ಜೆ.ಕರುಣೇಶಗೌಡ ಮತ್ತು ಪಿಎಸ್ಐ ಸುರೇಶ ಮಂಟೂರ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: 2 ವರ್ಷದಲ್ಲಿ 15 ಮದುವೆ; ಇಬ್ಬರು ಮಕ್ಕಳ ತಾಯಿ: ಹನಿಮೂನ್ ಹೆಸರಲ್ಲಿ ವಂಚಿಸುತ್ತಿದ್ದವಳ ಬಂಧನ!