ಬಾಗಲಕೋಟೆ: ವ್ಯಕ್ತಿತ್ವ ವಿಕಸನಕ್ಕೆ ಪಠ್ಯದಷ್ಟೇ ಕ್ರೀಡೆಗಳು ಸಹ ಮಹತ್ವವಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎರಡಕ್ಕೂ ಮಹತ್ವ ನೀಡಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ಅಶೋಕ ಸದಲಗಿ ಹೇಳಿದ್ದಾರೆ.
ರಬಕವಿ-ಬನಹಟ್ಟಿ ಸಮೀಪದ ಹೊಸೂರಿನ ಪದ್ಮಾವತಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಸಿಬಿಎಸ್‍ಇ ಶಾಲೆಗಳ ಥ್ರೋ ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳು ವ್ಯಕ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತವೆ. ಓದು ನಮ್ಮ ಜ್ಞಾನವನ್ನು ಹೆಚ್ಚಿಸಿದ್ರೆ ಕ್ರೀಡೆಗಳು ನಮ್ಮನ್ನು ಸದೃಢ ವ್ಯಕ್ತಿಗಳನ್ನಾಗಿ ರೂಪಿಸುತ್ತವೆ. ಆದ್ದರಿಂದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ನಮ್ಮ ಜೀವನದಲ್ಲಿ ಅಗತ್ಯವಾಗಿವೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಅಶೋಕ ಸದಲಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸತೀಶ ಹಜಾರೆ ಮಾತನಾಡಿ, ಸೋಲು ಗೆಲವುಗಳನ್ನು ಲೆಕ್ಕಿಸದೆ ಎಲ್ಲರೂ ಕ್ರೀಡಾ ಮನೋಭಾವದಿಂದ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು ಎಂದರು. ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ, ಮುಧೋಳದ ಡಾ. ಎಸ್.ಖಾನ್ ಇದ್ದರು.