ಬಾಗಲಕೋಟೆ: ಎಂಎಸ್ಐಎಲ್ ಮದ್ಯದಂಗಡಿ ತೆರೆಯುವ ವಿಚಾರವಾಗಿ ಮದ್ಯದಂಗಡಿ ಮಾಲೀಕ ಹಾಗೂ ಬಡಾವಣೆ ಜನರ ಮಧ್ಯೆ ವಾಗ್ವಾದ ನಡೆದ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ನಡೆದಿದೆ.
ಇಳಕಲ್ ನಗರದ ಸಂಸ್ಕೃತಿ ಲೇಔಟ್ನ ಹನುಮಸಾಗರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಲೇಔಟ್ನಲ್ಲಿ ಜನ ವಸತಿ ಹಾಗೂ ಶಾಲಾ-ಕಾಲೇಜುಗಳಿರೋದ್ರಿಂದ ಮದ್ಯದ ಅಂಗಡಿ ತೆರೆಯದಂತೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಇನ್ನು ಇಳಕಲ್ ನಗರದ ಅಪ್ಪಾಜಿ ಎಂಬುವರಿಗೆ ಸೇರಿದ ಲೇಔಟ್ನಲ್ಲಿ ಎಂಎಸ್ಐಎಲ್ ಮಳಿಗೆ ತೆರೆಯಬೇಕಿತ್ತು. ಆದ್ರೆ ಮದ್ಯದಂಗಡಿಯ 50 ಮೀಟರ್ ಅಂತರದಲ್ಲೇ ಜನ ವಸತಿ ಪ್ರದೇಶ ಹಾಗೂ ಶಾಲಾ -ಕಾಲೇಜು ಗಳಿರೋದ್ರಿಂದ ಮದ್ಯ ಮಳಿಗೆ ಮುಚ್ಚಿ ಸಲಾಗಿತ್ತು.
ಸದ್ಯ ಮದ್ಯದಂಗಡಿ ಮಾಲೀಕರು ರಾಜಕೀಯ ವ್ಯಕ್ತಿಗಳ ಪ್ರಭಾವ ಬೀರಿ ಮತ್ತೆ ಮದ್ಯದಂಗಡಿ ರೀ ಓಪನ್ ಮಾಡ್ತಿದ್ದಾರೆ ಎಂದು ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದೆ. ಯಾವುದೇ ಕಾರಣಕ್ಕೂ ಬಡಾವಣೆಯಲ್ಲಿ ಮದ್ಯದಂಗಡಿ ತೆರಯಲು ಬಿಡಲ್ಲ ಎಂದು ಜನ್ರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಇಳಕಲ್ ಸಿಪಿಐ ಹಾಗೂ ಪಿಎಸ್ಐ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನು ಇಳಕಲ್ ನಗರದಲ್ಲಿ ಖಾಸಗಿ ಮದ್ಯದಂಗಡಿ ಲಾಬಿಯಿಂದ ಎಂಎಸ್ಐಎಲ್ ಮಳಿಗೆ ತೆರೆಯಲು ಅವಕಾಶ ಮಾಡ್ತಿಲ್ಲ ಅನ್ನೋ ಆರೋಪಗಳಿವೆ. ಎಂಎಸ್ಐಎಲ್ ಮಳಿಗೆಯಿಂದ ತಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತೆ ಎನ್ನುವ ಕಾರಣಕ್ಕೆ ಈ ರೀತಿಯ ಷಡ್ಯಂತ್ರ ನಡೀತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.