ಬಾಗಲಕೋಟೆ : ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಭಾರೀ ಅನಾಹುತ ಸೃಷ್ಟಿಯಾಗಿದೆ. ಭಾರಿ ಮಳೆಗೆ ಇಲ್ಲಿನ ಗ್ರಾಮಗಳು ಜಲಾವೃತವಾಗಿದೆ. ನೀರು ಪ್ರವಾಹ ಪೀಡಿತ ಪ್ರದೇಶವಾದ ಹಿರೇಮಾಗಿ ಗ್ರಾಮಕ್ಕೆ ವಿಧಾನಪರಿಷತ್ ಸದಸ್ಯ ಪಿ ಎಚ್ ಪೂಜಾರ್ ಭೇಟಿ ನೀಡಿದರು. ಟ್ರ್ಯಾಕ್ಟರ್ ಏರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿದ ಅವರು, ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದರು.
ಇಲ್ಲಿನ ಹಿರೇಮಾಗಿ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಪ್ರವಾಹದಿಂದಾಗಿ ಮುಳುಗಡೆಯಾಗಿದ್ದು, ಈ ಸಂದರ್ಭ ಮುಳುಗಡೆಯಾದ ಪ್ರದೇಶವನ್ನು ಶಾಸಕರು ಟ್ರಾಕ್ಟರ್ ನಲ್ಲಿ ಸಾಗಿ ವೀಕ್ಷಣೆ ಮಾಡಿದರು.
ಮಲಪ್ರಭಾ ನದಿಯಲ್ಲಿ ಪ್ರವಾಹ :ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ನದಿ ಪ್ರವಾಹದಿಂದ ಕೆಲ ಗ್ರಾಮಗಳು ಜಲಾವೃತಗೊಂಡಿದ್ದು, ಇಲ್ಲಿನ ಜನರು ಪರದಾಡುವಂತಾಗಿದೆ.ಜೊತೆಗೆ ಇಲ್ಲಿನ ಹುನಗುಂದ ತಾಲೂಕಿನ ಗಂಜಿಹಾಳ ಗ್ರಾಮಕ್ಕೆ ನೀರು ನುಗ್ಗಿದ್ದು, ಗ್ರಾಮದಲ್ಲಿರುವ ದೇವಾಲಯ ಹಾಗೂ ಮನೆಗಳು ಜಲಾವೃತವಾಗಿವೆ.
ಇಲ್ಲಿನ ಲಕ್ಕಮ್ಮ ದೇವಿ ದೇವಾಲಯ, ಅನ್ನದಾನೇಶ್ವರ ಮಠಕ್ಕೂ ನೀರು ನುಗ್ಗಿದ್ದು, ದೇವಾಲಯಗಳಿಗೆ ತೆರಳಲು ಭಕ್ತರು ಪರದಾಡುವಂತಾಗಿದೆ. ಗ್ರಾಮದ ನೀರಿನ ಟ್ಯಾಂಕ್ ನ ಸುತ್ತಮುತ್ತಲೂ ಮುಳುಗಡೆಯಾಗಿದ್ದು, ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ಇದೆ. ಮಲಪ್ರಭಾ ನದಿ ಹಾಗೂ ನವಿಲು ತೀರ್ಥ ಡ್ಯಾಮ್ ನಿಂದ ನೀರು ಹರಿಯಬಿಟ್ಟಿರುವುದರಿಂದ ಪ್ರವಾಹ ಭೀತಿ ಉಂಟಾಗಿದೆ.
ಇದನ್ನೂ ಓದಿ : ವಿಜಯಪುರದಲ್ಲೂ ಮಳೆಯೋ ಮಳೆ.. ಸಂಗಮನಾಥ ದೇವಸ್ಥಾನ ಜಲಾವೃತ