ಬಾಗಲಕೋಟೆ: ಮಹಾರಾಷ್ಟ್ರದ ನಾಂದೇಡದಲ್ಲಿ ನಡೆದ 3ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಕಮತಗಿ ಗ್ರಾಮದ ಕ್ರೀಡಾಪಟುಗಳು ಪ್ರಥಮ ಸ್ಥಾನ ಗಳಿಸಿದ್ದಾರೆ.
54ಕೆಜಿ ತೂಕದ ಕುಸ್ತಿ ಸ್ಪರ್ಧೆಯಲ್ಲಿ ವಿಠ್ಠಲ ಮಡಿವಾಳ ಮತ್ತು 800 ಮೀಟರ್ ರನ್ನಿಂಗ್ ಸ್ಪರ್ಧೆಯಲ್ಲಿ ಮೋಹನ್ ಪಾತ್ರೋಟ ಪ್ರಥಮ ಸ್ಥಾನ ಪಡೆದು ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದೇ ಅಕ್ಟೋಬರ್ 26 ರಂದು ಶ್ರೀಲಂಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಕಮತಗಿಯ ಈ ಇಬ್ಬರು ಕ್ರೀಡಾಪಟುಗಳು ಬಡತನ ಕುಟುಂಬದವರಾಗಿದ್ದಾರೆ. ವಿಠ್ಠಲ ಮಡಿವಾಳ ತನಗೆ ಇದ್ದ ದ್ವಿಚಕ್ರ ವಾಹನ ಮಾರಿ ಅದರಿಂದ ಬಂದ ಹಣದಲ್ಲಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಬಡತನದಲ್ಲೇ ಹುಟ್ಟಿ ಬೆಳೆದಿರುವ ಇವರು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಗೆ ಹೋಗುವಾಗ ವಾಹನ ಮಾರಿದ್ದ ಯುವಕರಿಗೆ ಈಗ ಶ್ರೀಲಂಕಾದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ, ಸಂಘ ಸಂಸ್ಥೆಗಳು ಇವರಿಗೆ ಸಹಾಯ ಹಸ್ತ ಚಾಚಿದರೆ ಈ ಗ್ರಾಮೀಣ ಕ್ರೀಡಾಪಟುಗಳು ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಬೆಳಗಲು ಸಹಕಾರಿಯಾಗಲಿದೆ.