ಬಾಗಲಕೋಟೆ: ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಗೆ ಸಂಬಂಧಪಟ್ಟಂತೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು, ತಹಶೀಲ್ದಾರ್ ಕಚೇರಿಗೆ ಮುತ್ತಿನ ಹಾಕಿ, ತಹಶೀಲ್ದಾರ್ ಜೊತೆಗೆ ವಾಗ್ದಾಳಿ ನಡೆಸಿದ ಘಟನೆ ಜರುಗಿತು.
ರಾಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ವತಿಯಿಂದ ಜಯಶ್ರೀ ಇಂಗಳೆ ಎಂಬುವವರು ಸ್ಪರ್ಧೆಸಲಿದ್ದು, ಜಾತಿ ಆದಾಯ ಪ್ರಮಾಣ ಇಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಲಿದೆ. ಈ ಹಿನ್ನೆಲೆ ಮಾಜಿ ಸಚಿವರಾದ ಎಚ್ವೈ ಮೇಟಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಸ್.ಜಿ.ನಂಜ್ಯಯನಮಠ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹಾಗೂ ವಕ್ತಾರರಾದ ನಾಗರಾಜ ಹದ್ಲಿ ಅವರ ನೇತೃತ್ವದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ, ತಹಶೀಲ್ದಾರ್ ಅವರ ಜೊತೆಗೆ ಮಾತಿನ ಚಕಿಮಕಿ ನಡೆಸಿದರು.
ನಾಮ ಪತ್ರ ಸಲ್ಲಿಸುವುದಕ್ಕೆ 3ಬಿ ಮರಾಠಾ ಎಂದು ಜಾತಿಯನ್ನು ನಮೂದಿಸುವಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಕೇಳುತ್ತಿದ್ದಾರೆ. ಆದರೆ, ತಹಶೀಲ್ದಾರ್ ಅವರು ,ಈ ಹಿಂದೆ ನಾಮಪತ್ರ ಸಲ್ಲಿಸುವಾಗ ಗೊಂದಳಿ ಜನಾಂಗ ಎಂದು ನಮೂದಿಸಲಾಗಿದೆ, ಈಗ ಮರಾಠಾ ಎಂದು ಬರೆದು ಕೂಡಲು ಆಗುವುದಿಲ್ಲ ಎಂದಿದ್ದಾರೆ.
ಬಿಜಾಪುರ ನಿವಾಸಿ ಆಗಿರುವ ಮಹಿಳೆಯು ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದು, ಗಂಡನ ಮನೆಯವರು ಮರಾಠಾ ಜನಾಂಗದವರಾಗಿರುವುದರಿಂದ ಹಾಗೂ ಎಲ್ಸಿಯಲ್ಲಿ ಮರಾಠಾ ಇರುವುದರಿಂದ ಅದೇ ಜಾತಿಯ ಪ್ರಮಾಣ ಪತ್ರ ನೀಡುವಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಒತ್ತಾಯಿಸಿದ್ದಾರೆ.
ಇನ್ನು ಎರಡು ಗಂಟೆಯಲ್ಲಿ ಮೇಲ್ ಮೂಲಕ ಮಾಹಿತಿ ತರಿಸಿಕೊಂಡು ಜಾತಿಯ ಪ್ರಮಾಣ ನೀಡಬೇಕು ಇಲ್ಲವಾದಲ್ಲಿ, ಹಗಲು - ರಾತ್ರಿ ಪ್ರತಿಭಟನೆ ಕುಳಿತುಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಎಚ್ಚರಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರರು ಪ್ರತಿಕ್ರಿಯೆ ನೀಡಿ, ಇವರ ಜಾತಿ ಪ್ರಮಾಣ ಪತ್ರದ ಬಗ್ಗೆ ದೂರು ಬಂದ ಹಿನ್ನೆಲೆ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಲಾರಿ-ಕಾರು ಮಧ್ಯೆ ಭೀಕರ ಅಪಘಾತ.. ಐವರ ದುರ್ಮರಣ