ಬಾಗಲಕೋಟೆ: ಕೋವಿಡ್-19 ಹಿನ್ನೆಲೆ ಉತ್ತರ ಕರ್ನಾಟಕದಲ್ಲಿಯೇ ವೈಶಿಷ್ಟ್ಯಪೂರ್ಣವಾಗಿ ಪಟಾಕಿ ಜಾತ್ರೆಯೆಂದೇ ಗುರ್ತಿಸಿಕೊಂಡಿದ್ದ ಬನಹಟ್ಟಿಯ ಪವಾಡ ಪುರುಷ ಕಾಡಸಿದ್ಧೇಶ್ವರ ಜಾತ್ರೆ ಈ ಬಾರಿ ಯಾವುದೇ ವಾದ್ಯ ವೃಂದ, ಧ್ವನಿವರ್ಧಕವಿಲ್ಲದೆ ಸಾಂಕೇತಿಕವಾಗಿ ನಡೆದಿದೆ.
ಪ್ರತೀ ವರ್ಷ ರಥೋತ್ಸವದ ಮುಂದೆ ಲಕ್ಷಾಂತರ ರೂ.ಗಳ ಮದ್ದು ಸುಡುವ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಯಿಂದಲೇ ನಡೆಯುತ್ತಿತ್ತು. ಆದರೆ ಕೋವಿಡ್ನಿಂದಾಗಿ ಪೊಲೀಸ್ ಭದ್ರತೆಯಲ್ಲಿ ಹಾಗೂ ತಾಲೂಕಾಡಳಿತದ ಸೂಚನೆ ಮೇರೆಗೆ ಜಾತ್ರಾ ಕಮಿಟಿ ಕಾನೂನಿನ ನಿಯಮದಡಿ ಹಾಗೂ ಸಾಂಸ್ಕೃತಿಕವಾಗಿ ಧಕ್ಕೆಯಾಗದಂತೆ ಮಂಗಳವಾರ ಕಾಡಸಿದ್ಧೇಶ್ವರ ಜಾತ್ರೆ ಸರಳವಾಗಿ ನೆರವೇರಿತು.
ಮುಂಜಾನೆಯಿಂದಲೂ ಕೆಲ ಭಕ್ತಾದಿಗಳಿಂದ ಧೀಡ್ ನಮಸ್ಕಾರ ಹಾಕುವುದು, ಕಾಡಸಿದ್ಧೇಶ್ವರ ರಥಕ್ಕೆ ಕಂಟಮಾಲೆ ಹಾಕುವುದು ಸೇರಿದಂತೆ ಕೆಲ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದವು. ಜನದಟ್ಟನೆಯಾಗದಂತೆ ಶಾಂತವಾಗಿ ಪಟ್ಟಣದ ಜನತೆ ದೇವರ ದರ್ಶನ ಪಡೆದು ಪುನೀತರಾದರು.
ಪ್ರಸಾದವಿಲ್ಲ: ಹಿಂದೆ ಬೆಳಗ್ಗಿನಿಂದಲೇ ಲಕ್ಷಾಂತರ ಭಕ್ತರಿಗೆ ಇಡ್ಲಿ, ಜಿಲೇಬಿಯನ್ನು ಹಂಚುತ್ತಿದ್ದರು. ಆದರೆ ಈ ಬಾರಿ ಭಕ್ತರಿಗೆ ಯಾವದೇ ಪ್ರಸಾದ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿರಲಿಲ್ಲ. ಸಂಜೆ 6 ಗಂಟೆಗೆ ಕಾಡಸಿದ್ಧೇಶ್ವರ ಜಾತ್ರಾ ಕಮಿಟಿಯ ಹಲವಾರು ಹಿರಿಯರು ರಥಕ್ಕೆ ಪೂಜೆ ನೆರವೇರಿಸಿದರು.