ಬಾಗಲಕೋಟೆ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಪ್ರಮುಖ ಶಕ್ತಿಪೀಠವಾಗಿರುವ ಬಾದಾಮಿ ಬನಶಂಕರಿ ದೇವಿಗೆ ಲಕ್ಷ ಬಳೆಗಳನ್ನು ಅರ್ಪಿಸಿ ವಿಶೇಷ ಪೂಜೆ ಪುನಸ್ಕಾರ ಮಾಡಲಾಯಿತು.
ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬನಶಂಕರಿ ದೇವಿಗೆ ಭಕ್ತರು ಲಕ್ಷ ಬಳೆಗಳನ್ನು ಹಾಕಿ ಪೂಜೆ ಮಾಡುವುದಾಗಿ ಹರಕೆ ಇಟ್ಟುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಂದು ಇಲಕಲ್ಲ ಪಟ್ಟಣದ ದೇವಾಂಗ ಸಮಾಜದ ಭಕ್ತರು ಸೇರಿಕೊಂಡು ಒಂದು ಲಕ್ಷ ಗಾಜಿನ (ವಿವಿಧ ಬಣ್ಣದ ಬಳೆ) ಬಳೆಗಳನ್ನು ತಂದು ಇಂದು ದೇವಿಗೆ ಮಾಲಾರ್ಪಣೆ ಮಾಡಿ, ವಿಶೇಷ ಪೂಜೆಯ ಹರಕೆ ಸಲ್ಲಿಸಿದ್ದಾರೆ.
ಶ್ರಾವಣ ಮಾಸದಲ್ಲಿ ಇಂಥ ಪೂಜೆ ಮಾಡಬೇಕು ಎಂದು ಭಕ್ತರು ಹರಕೆ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಆದರೆ ಸೂಕ್ತ ಸಮಯದಲ್ಲಿ ಬಳೆಗಳು ಸಿಗದ ಹಿನ್ನೆಲೆ ತಡವಾಗಿ ಹರಕೆ ಸಲ್ಲಿಸಲಾಗಿದೆ.
ಒಂದು ಲಕ್ಷ ಬಳೆಗಳನ್ನು ಸಂಗ್ರಹಿಸಿ ವಾಹನದ ಮೂಲಕ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಲಾಗಿದೆ. ಕೊರೊನಾ ಸೇರಿದಂತೆ ಇತರೆ ಮಾರಕ ರೋಗಗಳು ಹರಡದಂತೆ ಪ್ರಾರ್ಥಿಸುವ ಮೂಲಕ ಲೋಕಕಲ್ಯಾಣಕ್ಕಾಗಿ ಈ ಪೂಜೆ ಮಾಡಿಸಿರುವುದಾಗಿ ದೇವಾಂಗ ಸಮಾಜದ ಮುಖಂಡರು ತಿಳಿಸಿದ್ದಾರೆ.