ಬಾಗಲಕೋಟೆ: ತಂದೆಯನ್ನು ನಿರ್ದಯವಾಗಿ ಕೊಲೆ ಮಾಡಿ ಮೃತದೇಹವನ್ನು ತುಂಡರಿಸಿದ್ದ ಆರೋಪಿ ಪುತ್ರ ವಿಠ್ಠಲ್, ಘಟನೆ ನಡೆದು ನಾಲ್ಕು ದಿನದ ಬಳಿಕ ತಾನೇ ಕುಟುಂಬದ ಮುಂದೆ ದುಷ್ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ತಂದೆ ಪರಶುರಾಮ್ ನೀಡುತ್ತಿದ್ದ ಅತಿಯಾದ ಕಿರುಕುಳದಿಂದ ಬೇಸತ್ತು ಮಗ ಕೊಲೆ ಮಾಡಿರುವುದಾಗಿ ಪರಶುರಾಮ್ ಪತ್ನಿ ಸರಸ್ವತಿ ಹಾಗೂ ಹಿರಿಯ ಪುತ್ರ ಆನಂದ ತಿಳಿಸಿದ್ದಾರೆ.
ಪರಶುರಾಮ್ ಮದ್ಯ ಸೇವಿಸಿ ಮನೆಗೆ ಬಂದು ಪ್ರತಿನಿತ್ಯ ಜಗಳ ಮಾಡುತ್ತಿದ್ದ. ಹೊಲದಲ್ಲಿ ಏನೇ ಕೆಲಸ ಮಾಡಿದರೂ ಏನಾದರೊಂದು ಕ್ಯಾತೆ ತೆಗೆಯುತ್ತಿದ್ದನು. ಇದರಿಂದ ಬೇಸತ್ತು ನಾವು ಹೊಲ ಬಿಟ್ಟು ಬೇರೆಡೆ ಇದ್ದೆವು ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 6ರ ಮಂಗಳವಾರ ರಾತ್ರಿ ಪರಶುರಾಮ್ ಮತ್ತೆ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಆಗ ಕೊಲೆ ಮಾಡಿ ಮೃತದೇಹವನ್ನು ಕೊಳವೆಬಾವಿಗೆ ಹಾಕಿದ್ದಾನೆ. ಈ ವಿಚಾರ ತಿಳಿದ ಕುಟುಂಬಸ್ಥರು ಮುಧೋಳ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂಬ ಸಂಗತಿ ಬಯಲಾಗಿದೆ.
ಪರಶುರಾಮ್ ಗೌಂಡಿ ಕೆಲಸಕ್ಕೆ ಹೋಗುತ್ತಿದ್ದ. ಹೀಗೆ ಹೋದವನು ಎರಡು ಮೂರು ದಿನಗಳ ಬಳಿಕವೇ ಮನೆಗೆ ಬರುತ್ತಿದ್ದ. ಮನೆಗೆ ಬಂದಾಗಲೆಲ್ಲ ಮಡದಿ, ಮಕ್ಕಳ ಜೊತೆ ಜಗಳ ಮಾಡುತ್ತಿದ್ದನಂತೆ. ಇದೀಗ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲೂ ಭೀಕರ ಕೊಲೆ: ತಂದೆ ದೇಹವನ್ನು 30ಕ್ಕೂ ಹೆಚ್ಚು ಪೀಸ್ ಮಾಡಿ ಕೊಳವೆ ಬಾವಿಗೆ ಎಸೆದ ಮಗ!