ಬಾಗಲಕೋಟೆ: ಐತಿಹಾಸಿಕ ಹಿನ್ನೆಲೆಯುಳ್ಳ ಚಾಲುಕ್ಯರು ಆಳಿದ ನಾಡು ಬಾದಾಮಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದೆ. ಹಿಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿ ಶ್ರೀ ರಾಮುಲು ಸ್ಪರ್ಧೆಯಿಂದ ಬಾದಾಮಿ ಹೈವೋಲ್ಟೆಜ್ ಕ್ಷೇತ್ರವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ತಂದೆ ಮತ್ತು ಬಿಜೆಪಿ ಅಭ್ಯರ್ಥಿಯ ಪರವಾಗಿ ಮಗ ಪ್ರಚಾರ ಕಾರ್ಯದಲ್ಲಿ ತೊಡಗಿರುವುದರಿಂದ ಬಾದಾಮಿ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಕಳೆದ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕ್ಷೇತ್ರ ತ್ಯಾಗ ಮಾಡಿದ್ದ ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ ಅವರಿಗೆ ಈ ಬಾರಿ ಸಿದ್ದರಾಮಯ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಆದರೆ ಬಿ ಬಿ ಚಿಮ್ಮನಕಟ್ಟಿ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆ ಅವರ ಬದಲಾಗಿ ಪುತ್ರ ಭೀಮಸೇನ ಚಿಮ್ಮನಕಟ್ಟಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಈ ಬಾರಿ ಹೇಗಾದರೂ ಮಾಡಿ ಪುತ್ರನನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುವ ಮೂಲಕ ಮತ್ತೆ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ತಮ್ಮ ಅನಾರೋಗ್ಯದ ನಡುವೆಯೂ ಪುತ್ರನ ಗೆಲುವಿನಗಾಗಿ ಚಿಮ್ಮನಕಟ್ಟಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಬಂಡಾಯ ಎದಿದ್ದ ಆಪ್ತರಿಗೆ ಸಿದ್ದರಾಮಯ್ಯ ಸಮಾಧಾನಪಡಿಸಿ, ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಬಾದಾಮಿ ಕ್ಷೇತ್ರದಲ್ಲಿ ಕುರುಬ ಸಮುದಾಯದ ಪ್ರಾಬಲ್ಯ ಹೆಚ್ಚಾಗಿದೆ. ಮಾಜಿ ಸಚಿವರಾದ ಬಿ ಬಿ ಚಿಮ್ಮನಕಟ್ಟಿ ಅಖಾಡಕ್ಕಿಳಿದು ಪ್ರಚಾರ ಮಾಡಿದರೆ ಮಾತ್ರ ಮಗನ ಗೆಲುವಿಗೆ ದಾರಿ ಸುಗಮವಾಗಲಿದೆ ಎಂದು ಪ್ರತಿ ನಿತ್ಯ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ಎಸ್ ಟಿ ಪಾಟೀಲರ ಪರವಾಗಿ ಪುತ್ರ ಶಂಕರಗೌಡ ಪಾಟೀಲ ತಂದೆ ಗೆಲುವಿಗಾಗಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರದೆಲ್ಲೆಡೆ ಓಡಾಡುತ್ತ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಹಲವು ಸಾಮಾಜಿಕ ಸೇವೆ ಮಾಡಿಕೊಂಡು ಬಂದಿರುವ ಎಸ್ ಟಿ ಪಾಟೀಲರು ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಎಸ್ ಟಿ ಪಾಟೀಲ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ನಿವಾಸಿಯಾಗಿದ್ದಾರೆ. ಸದ್ಯ ಅವರ ಪುತ್ರ ತಂದೆ ಗೆಲುವಿಗಾಗಿ ತನ್ನದೇ ಆದ ಯುವಕರ ಪಡೆ ಕಟ್ಟಿಕೊಂಡು, ಇಡೀ ಕ್ಷೇತ್ರದಲ್ಲಿ ಓಡಾಡುತ್ತಾ ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಹೀಗೆ ಬಾದಾಮಿ ಮತಕ್ಷೇತ್ರದಲ್ಲಿ ತಂದೆಗಾಗಿ ಪುತ್ರ ಮತ್ತು ಮಗನಿಗಾಗಿ ತಂದೆ ಪ್ರಚಾರ ಮಾಡುತ್ತಿದ್ದಾರೆ.
ಇನ್ನು ಬಾದಮಿ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಹನಮಂತ ಮಾವಿನಮರದ ಕಳೆದ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಭಾರಿ ಅಂತರದಿಂದ ಸೋತರು. ಕಳೆದ ಐದು ವರ್ಷದಿಂದ ಕ್ಷೇತ್ರದಲ್ಲಿ ಸುತ್ತಾಡುತ್ತ ಜನ ಸಂಪರ್ಕದಲ್ಲಿ ಇದ್ದಾರೆ. ಈ ಬಾರಿ ಜೆಡಿಎಸ್ ಪಕ್ಷವು ಸಹ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನೀಡಲು ಅಣಿಯಾಗಿದ್ದು, ಬಾದಾಮಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿ ಮತದಾರರು ಯಾರ ಕೈಯನ್ನು ಹಿಡಿಯುತ್ತಾರೆಂದು ಚುನಾವಣಾ ಫಲಿತಾಂಶದ ವರೆಗೂ ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಪತಿಗೆ ಪತ್ನಿಯೇ ಸ್ಟಾರ್ ಪ್ರಚಾರಕಿ: ಚುನಾವಣಾ ಅಖಾಡ ರಂಗೇರಿಸಿದ ಮಹಿಳಾಮಣಿಯರು