ಬಾಗಲಕೋಟೆ: ರಾಜ್ಯ ಸರ್ಕಾರ ಬಜೆಟ್ ತಯಾರಿಯಲ್ಲಿರುವ ಸಮಯದಲ್ಲಿಯೇ ಮಾಜಿ ಸಿಎಂ ಸಿದ್ದರಾಮಯ್ಯರವರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿಗಳ ಅನುದಾನ ನೀಡುವಂತೆ ಪತ್ರದ ಮೂಲಕ ಚಳುವಳಿ ಆರಂಭಿಸಿದ್ದಾರೆ.
ಐತಿಹಾಸಿಕ ತಾಣಗಳ ಅಭಿವೃದ್ಧಿ ಸೇರಿದಂತೆ ಏತ ನೀರಾವರಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ. ಕೆರೂರ ಏತ ನೀರಾವರಿಗೆ 525 ಕೋಟಿ ರೂ, ಬಾದಾಮಿ, ಪಟ್ಟದಕಲ್ಲು, ಬನಶಂಕರಿ, ಮಹಾಕೂಟ ಐತಿಹಾಸಿಕ ತಾಣಗಳ ಅಭಿವೃದ್ದಿಗೆ 1,000 ಕೋಟಿ, ಬಾದಾಮಿ, ಮಹಾಕೂಟ, ಗುಳೇದಗುಡ್ಡ ಪ್ರವಾಸಿ ತಾಣಗಳಲ್ಲಿ ಟ್ರೀ ಪಾರ್ಕ್ಗೆ 100 ಕೋಟಿ, ಬಾದಾಮಿ ಕ್ಷೇತ್ರದಲ್ಲಿ ಅವಶ್ಯ ಇರುವಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಕೆರೆ ತುಂಬುವ ಯೋಜನೆಗಾಗಿ 90 ಕೋಟಿ, ಬಾದಾಮಿ ಪಟ್ಟಣದಲ್ಲಿ ಚಾಲುಕ್ಯ ಅಭಿವೃದ್ದಿ ಪ್ರಾಧಿಕಾರದ ಕಾರ್ಯರೂಪಕ್ಕೆ 25 ಕೋಟಿ, ಗುಳೇದಗುಡ್ಡ ಪಟ್ಟಣದಲ್ಲಿ ಜವಳಿ ಪಾರ್ಕ್ಗೆ 50 ಕೋಟಿ, ಬಾದಾಮಿ ಪಟ್ಟಣದಲ್ಲಿ ಮಲ್ಟಿ ಕಾಂಪ್ಲೆಕ್ಸ್ ಸ್ಥಾಪನೆಗೆ 25 ಕೋಟಿ, ಗುಳೇದಗುಡ್ಡದಲ್ಲಿ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಘಟಕ ಸ್ಥಾಪನೆಗೆ ಬಜೆಟ್ನಲ್ಲಿ ಅನುದಾನ ಘೋಷಣೆ ಮಾಡುವಂತೆ ಮತ್ತು ಬಾದಾಮಿಯಲ್ಲಿ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪನೆಗೆ ಅನುದಾನ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಗುಳೇದಗುಡ್ಡ ಪಟ್ಟಣಕ್ಕೆ ಪಾಲಿಟೆಕ್ನಿಕ್ ಕಾಲೇಜ್ ಮಂಜೂರು ಹಾಗೂ ಬಾದಾಮಿ ಪಟ್ಟಣಕ್ಕೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಬೇಕು. ಬಾದಾಮಿ ಕ್ಷೇತ್ರದ ನೇಕಾರ ಪಟ್ಟಣವಾಗಿರುವ ಗುಳೇದಗುಡ್ಡದಲ್ಲಿ ಕೈಗಾರಿಕಾ ಕೇಂದ್ರ ಸ್ಥಾಪಿಸುವಂತೆ ಹಾಗೂ ಹೈನು ವಿಜ್ಞಾನ ಮಹಾವಿದ್ಯಾಲಯ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಪ್ರಸಕ್ತ ಬಜೆಟ್ನಲ್ಲಿ ಬಾದಾಮಿ ಕ್ಷೇತ್ರದ ಅಭಿವೃದ್ಧಿಗಾಗಿ ಒಟ್ಟು 1,815 ಕೋಟಿ ರೂ. ಅನುದಾನದ ಬೇಡಿಕೆಯನ್ನು ಇಟ್ಟಿದ್ದಾರೆ.