ಬಾಗಲಕೋಟೆ: ಹುನಗುಂದ ಮತಕ್ಷೇತ್ರದಲ್ಲಿ ಈ ಬಾರಿ ಕಾಶಪ್ಪನವರ ಗೆದ್ದೇ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳುವ ಮೂಲಕ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಟಿಕೆಟ್ ಪಕ್ಕಾ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದ ಬಳಿ ಎಸ್ಆರ್ಕೆ ಸಕ್ಕರೆ ಕಾರ್ಖಾನೆಯ ಭೂಮಿ ಪೂಜೆಯ ಸಮಾರಂಭಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಈ ಬಾರಿ ನಾವು ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬಂದೇ ಬರ್ತೀವಿ. ಅಲ್ಲದೇ ವಿಜಯಾನಂದ ಕಾಶಪ್ಪನವರ್ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದು ಮತ್ತೇ ವಿಧಾನಸಭೆಗೆ ಬರಲಿದ್ದಾರೆ. ಅದಕ್ಕೆ ನೀವೆಲ್ಲ ಆಶೀರ್ವಾದಿಸಬೇಕು ಎಂದು ಹೇಳಿ ಪರೋಕ್ಷವಾಗಿ ಟಿಕೆಟ್ ಘೋಷಣೆ ಮಾಡಿದರು.
ಇನ್ನು ಕಬ್ಬಿಗೆ ಬೆಲೆ ನಿಗದಿ ಮಾಡಿ ಅಂತ ರೈತರು ಹೋರಾಟ ಮಾಡುತ್ತಿದ್ದಾರೆ. ಕಬ್ಬಿನ ಬೆಲೆ ಬಿದ್ದಾಗ ನಾನು ಸಿಎಂ ಆಗಿದ್ದಾಗ ಟನ್ಗೆ 200 ಪ್ರೋತ್ಸಾಹ ಧನ ಘೋಷಣೆ ಮಾಡಿದ್ದೆ. ಆದರೇ ನೀವು ಏನು ಮಾಡಿದ್ರಿ ಎಂದು ಸಿಎಂ ಬೊಮ್ಮಾಯಿ ಅವರಿಗೆ ಪ್ರಶ್ನಿಸಿದರು. ನಾವು ಅಧಿಕಾರಕ್ಕೆ ಬಂದರೆ ಕಬ್ಬು ಬೆಳೆಗಾರರು ಅಷ್ಟೇ ಅಲ್ಲ, ಬೇರೆ ಯಾವುದೇ ಬೆಳೆ ಆದರೂ ಎಮ್ಎಸ್ಪಿ ಮಾದರಿ ಬೆಲೆ ಕೊಡುತ್ತೇವೆ. ರೈತರು ಉಳಿದರೆ ಸರ್ಕಾರ ಉಳಿಯುತ್ತದೆ. ನಾವೆಲ್ಲ ಉಳಿಯೋದಕ್ಕೆ ಸಾಧ್ಯ ಎಂದರು.
ಸರ್ಕಾರ ಖಜಾನೆ ದುಡ್ಡು ಯಾರಪ್ಪನ ಮನೆ ದುಡ್ಡಲ್ಲ, ಜನರ ಹಣ ಖರ್ಚು ಮಾಡೋಕೆ ಬೊಮ್ಮಾಯಿ ಅವರಿಗೆ ಯಾಕೆ ಹೊಟ್ಟೆ ಉರಿ ಎಂದು ಪ್ರಶ್ನೆ ಮಾಡಿದ ಅವರು ಎಲ್ಲ ಯೋಜನೆ ಬೇಕಾದರೆ ಮತ್ತೆ ನಾವೆ ಅಧಿಕಾರಕ್ಕೆ ಬರಬೇಕು. ನೀರಾವರಿಗೆ ಎರಡು ಲಕ್ಷ ಕೋಟಿ ಖರ್ಚು ಮಾಡುತ್ತೇವೆ. ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ. ಇದು ಜನರಿಗೆ ಕೊಡತಕ್ಕಂತಹ ಭರವಸೆ. ನೇಕಾರರ ಬಗ್ಗೆ ಇವರು ಬಹಳ ಮಾತಾನಾಡುತ್ತಾರೆ. ನಾ ಇದ್ದಾಗ ಸಾಲ ಮನ್ನಾ ಮಾಡಿದ್ದೆ, ಒಂದು ಯುನಿಟ್ಗೆ 1.25 ಪೈಸೆ ಮಾಡಿದ್ದೆ. ಜವಳಿ ಪಾರ್ಕ್ ಘೋಷಣೆ ಮಾಡಿದ್ದೆ. ಊಳುವವನೆ ಭೂ ಒಡೆಯ ಅಂತ ನಾವು ಮಾಡಿದ್ದೇವು, ಆದರೇ ಈಗ ಉಳ್ಳವನೆ ಭೂ ಒಡೆಯ ಆಗಿದ್ದಾನೆ ಎಂದು ಕಿಡಿಕಾರಿದರು.
ಇನ್ನು 450 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣ ಆಗಲಿದ್ದು, ಸುಮಾರು ಹತ್ತು ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ: ಕಾಂಗ್ರೆಸ್‌ಗೆ ನಾವು ಮುಸ್ಲಿಮರ ವೋಟಿಗೆ ನಾವು ಕೈ ಹಾಕ್ತೀವಿ ಅನ್ನೋ ಭಯ: ಈಶ್ವರಪ್ಪ