ಬಾಗಲಕೋಟೆ: ಬಾದಾಮಿ ಮತ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಗರು ಕೆಲಸ ಮಾಡದಿದ್ರೆ ನಾನೇ ಬಂದು ಕೆಲಸ ಮಾಡಿ ಕೊಡುತ್ತೇನೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನಾನೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇನೆಂದು ಪರೋಕ್ಷವಾಗಿ ಹೇಳಿದರು.
ಆಲೂರ ಎಸ್.ಕೆ ಗ್ರಾಮದಲ್ಲಿ ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಮಲಪ್ರಭಾ ನದಿಗೆ ಬ್ರಿಡ್ಜ್ ಕಮ್ ಬ್ಯಾರೇಜ್ ಯೋಜನೆಯನ್ನ ಈ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವ ಕಾರಜೋಳ ಮಾಡಲಿ. ಒಂದು ವೇಳೆ ಮಾಡದೆ ಹೋದ್ರೆ ನಾನೇ ಬಂದು ಮಾಡುತ್ತೇನೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕೊಟ್ಟ ಭರವಸೆಯನ್ನ ನಾವೇ ಈಡೇರಿಸುತ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದರು.
ಕಳೆದ ಚುನಾವಣೆಯಲ್ಲಿ ನಾನು ಇಲ್ಲಿಗೆ ಹೆಚ್ಚು ಬಂದು ಪ್ರಚಾರ ಮಾಡದಿದ್ದರೂ ಕೂಡ ನೀವು ಗೆಲ್ಲಿಸಿದ್ದೀರಿ. ನಾನು ಹೆಚ್ಚು ಬಾರಿ ಕ್ಷೇತ್ರಕ್ಕೆ ಬರದಿದ್ದರೂ ನನ್ನ ಮೇಲೆ ಪ್ರೀತಿ ಇಟ್ಟಿದ್ದೀರಿ. ಇದಕ್ಕಾಗಿ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಕ್ಷೇತ್ರದ ಜನತೆಗೆ ಕೈ ಎತ್ತಿ ನಮಸ್ಕರಿಸಿದರು. ಇದೇ ಸಮಯದಲ್ಲಿ ಬಾದಾಮಿಯಿಂದಲೇ ಮತ್ತೆ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯನವರಿಗೆ ಕ್ಷೇತ್ರದ ಜನರು ಒತ್ತಾಯಿಸಿದರು.
ಇದೇ ಸಮಯದಲ್ಲಿ ಅಧಿಕಾರಿ ವಿರುದ್ಧ ಗರಂ ಆದ ಘಟನೆಯೂ ನಡೆಯಿತು. ಬಾದಾಮಿ ತಾಲೂಕು ಪಂಚಾಯತ್ ಎಇಒ ಮಲ್ಲಿಕಾರ್ಜುನ ವಿರುದ್ಧ ಗರಂ ಆದ ಸಿದ್ದರಾಮಯ್ಯ, ಏಕವಚನದಲ್ಲಿ ಸಂಭೋದಿಸಿ ಏಯ್ ಬಾರಯ್ಯ ಇಲ್ಲಿ, ನರೇಗಾ ಯೋಜನೆಯಲ್ಲಿ ಎಷ್ಟು ಖರ್ಚು ಮಾಡಿರೋದು ಹೇಳು ಎಂದರು. ಈ ವೇಳೆ ಅಧಿಕಾರಿ 16 ಲಕ್ಷ ರೂ. ಕಾಮಗಾರಿ ಬಗ್ಗೆ ಮಾಹಿತಿ ನೀಡಲು ತಡವರಿಸಿದರು.
ಬೆಂಗಳೂರಿನಲ್ಲಿ ನಡೆದ ಚಂದ್ರು ಹತ್ಯೆ ಪ್ರಕರಣದ ಕುರಿತು ಮಾಹಿತಿ ಇಲ್ಲ ಎಂದ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇವರ ಹತ್ತಿರ ಇಂಟೆಲಿಜೆನ್ಸಿ ಇಲ್ಲವಾ?. ಬೆಳಗ್ಗೆಯಿಂದ ಸಾಯಂಕಾಲದವರೆಗೆ ಇವರಿಗೆ ಇಂಟೆಲಿಜೆನ್ಸಿ ಮಾಹಿತಿ ನೀಡೋದಿಲ್ಲಾ?. ಮಾಹಿತಿ ಇಲ್ಲ ಅಂದ್ರೆ ಏನು ಹೇಳಬೇಕು ಎಂದು ವಾಗ್ದಾಳಿ ನಡೆಸಿದರು.
ಹಿಂದೂಯೇತರರಿಗೆ ಮಾರಾಟ ನಿರ್ಬಂಧ ಹೇರುವ ವಿಚಾರವಾಗಿ ಮಾತನಾಡಿದ ಅವರು, ಮತಗಳನ್ನ ಸೆಳೆಯಲು ಸಮಾಜದಲ್ಲಿ ಅಶಾಂತಿ ಉಂಟು ಮಾಡಲಿಕ್ಕೆ ಹಾಗೂ ಸಾಮಾರಸ್ಯ ಹಾಳು ಮಾಡಲಿಕ್ಕೆ ಇಂತಹದ್ದನ್ನು ಬಿಜೆಪಿ ಪಕ್ಷದವರು ಹುಟ್ಟು ಹಾಕುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದನ್ನೂ ಓದಿ: ಅಲ್ ಖೈದಾ ಮುಖ್ಯಸ್ಥನ ಹೇಳಿಕೆಗೆ ನಮ್ಮ ಸರ್ಕಾರ ಸೊಪ್ಪು ಹಾಕುವುದಿಲ್ಲ: ಲಕ್ಷ್ಮಣ ಸವದಿ