ಬಾಗಲಕೋಟೆ : ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಏಪ್ರಿಲ್ 13ರಂದು 108 ಗ್ರಾಮಗಳಲ್ಲಿ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಆರ್ ಪಾಟೀಲ ತಿಳಿಸಿದ್ದಾರೆ. ಅವರು ಬಾಗಲಕೋಟೆ ನಗರದಲ್ಲಿ ಮಾತನಾಡುತ್ತಾ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ, ಮಹಾದಾಯಿ ಮತ್ತು ನವಲಿ ನೀರಾವರಿ ಯೋಜನೆಗಳು ತ್ವರಿತವಾಗಿ ಅನುಷ್ಠಾನಗೊಳಿಸಲು ಒತ್ತಾಯಿಸಿ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಗದಗ ಜಿಲ್ಲೆಯ ನರಗುಂದದಿಂದ ಪ್ರಾರಂಭವಾಗಲಿರುವ ರ್ಯಾಲಿಗೆ ಶಿರಹಟ್ಟಿ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ. ಗದಗ,ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಸಂಚಾರ ಮಾಡಿ, ಏಪ್ರಿಲ್ 17ರಂದು ಬೀಳಗಿ ತಾಲೂಕಿನ ಬಾಡಗಂಡಿ ಬಾಪೂಜಿ ಅಂತಾರಾಷ್ಟ್ರೀಯ ಶಾಲೆಯ ಆವರಣದಲ್ಲಿ ಸಮಾರೋಪವಾಗಲಿದೆ ಎಂದರು.
ಕೃಷ್ಣ ಮೇಲ್ದಂಡೆ ಯೋಜನೆ ಹಂತ 3ಕ್ಕೆ ಹಂಚಿಕೆಯಾದ 130 ಟಿಎಂಸಿ ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕದ 7 ಜಿಲ್ಲೆಗಳ 15 ಲಕ್ಷ ಎಕರೆ ಜಮೀನನ್ನು ನೀರಾವರಿಗೆ ಒಳಪಡಿಸಬೇಕು. ಈ ಯೋಜನೆಯಿಂದ ಬಾಧಿತರಾಗುವ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಿಕೊಡಬೇಕು.
ದಿ. ಬಿ. ಎಮ್ ಹೊರಕೇರಿಯವರು ಹುಟ್ಟು ಹಾಕಿದ ಮಹಾದಾಯಿ ಯೋಜನೆ ಮೂಲಕ 13.5 ಟಿಎಂಸಿ ನೀರನ್ನು ಬಳಸಿಕೊಂಡು ಧಾರವಾಡ, ಬೆಳಗಾವಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಹಾಗೂ ಇನ್ನಿತರ ಸೌಲಭ್ಯಗಳಾಗಿ ಈ ನೀರನ್ನು ಒದಗಿಸಬೇಕಾಗಿದೆ ಎಂದರು.