ಬಾಗಲಕೋಟೆ: ಆರ್ಎಸ್ಎಸ್ ಮುಖಂಡರೊಬ್ಬರು ಹೃದಯಾಘಾತದಿಂದ ಕಾರಿನಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಲೋಕಾಪೂರ ಪಟ್ಟಣದ ಬಳಿ ನಡೆದಿದೆ. ಸಿದ್ದು ಚಿಕ್ಕದಾನಿ ಮುಧೋಳ (55) ಮೃತರು. ಇವರು ಆರ್ಎಸ್ಎಸ್ನಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಸಿದ್ದು ಕಳೆದ ರಾತ್ರಿ ಬಾಗಲಕೋಟೆ ಹೋಗಿ ವಾಪಸ್ ಬರುವಾಗ ಈ ಘಟನೆ ಸಂಭವಿಸಿದೆ.
ಮುಧೋಳ ಪಟ್ಟಣದ ನಿವಾಸಿಯಾಗಿರುವ ಇವರು, ಶಿವಾಜಿ ಸರ್ಕಲ್ ಬಳಿ ಮಂಜುನಾಥ ಮೊಬೈಲ್ ಶಾಪ್ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. ನಿನ್ನೆ ರಾತ್ರಿ ಲೋಕಾಪೂರ ಪಟ್ಟಣದ ಸಮೀಪ ಇರುವ ಎಸ್ಆರ್ ಪೆಟ್ರೋಲ್ ಪಂಪ್ನಲ್ಲಿ ಡೀಸೆಲ್ ಹಾಕಿಸಿಕೊಂಡು ಹೊರಡುವ ಸಮಯದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಆದರೆ, ತೀವ್ರ ಹೃದಯಾಘಾತದಿಂದ ಅವರು ಕಾರಲ್ಲೇ ಮೃತಪಟ್ಟಿದ್ದಾರೆ.
ಮುಂಜಾನೆ ಸಮಯದಲ್ಲಿ ಪೆಟ್ರೋಲ್ ಬಂಕ್ನ ಕೆಲಸಗಾರರು ಬಂದು ನೋಡಿದಾಗ ಸಿದ್ದು ಅವರು ಮೃತ ಪಟ್ಟಿರುವುದು ಖಾತ್ರಿ ಆಗಿದೆ. ನಂತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಲೋಕಾಪೂರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವು
ಲಾರಿ ಡ್ರೈವಿಂಗ್ ವೇಳೆ ಹೃದಯಾಘಾತ: ಲಾರಿ ಡ್ರೈವಿಂಗ್ ವೇಳೆ ಹೃದಯಾಘಾತವಾದ ಪರಿಣಾಮ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಅಸುನೀಗಿರುವ ಘಟನೆ ಅಕ್ಟೋಬರ್ 3ರಂದು ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿತ್ತು. ತಮಿಳುನಾಡು ಮೂಲದ ಸೆಲ್ವರಾಜ್(50) ಮೃತ ಲಾರಿ ಚಾಲಕ.
ನಂಜನಗೂಡು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ವೇಳೆ ಲಾರಿ ಚಾಲಕನಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಇದರಿಂದಾಗಿ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ, ಸರ್ವೀಸ್ ರಸ್ತೆಯಲ್ಲಿ ನಿಂತಿದ್ದ ಗೂಡ್ಸ್ ಟೆಂಪೋಗೆ ಗುದ್ದಿ, ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದ್ದರು. ಈ ಭೀಕರ ಘಟನೆಯಲ್ಲಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು.
ವಿದ್ಯಾರ್ಥಿಗೆ ಹೃದಯಾಘಾತ: ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಸೆಪ್ಟೆಂಬರ್ 30 ರಂದು ನಡೆದಿತ್ತು. 9 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದ ಬಾಲಕ ಅರ್ಧ ವಾರ್ಷಿಕ ಪರೀಕ್ಷೆ ಬರೆಯಲು ಶಾಲೆಗೆ ಹೋದ ವೇಳೆ ಘಟನೆ ಸಂಭವಿಸಿತ್ತು. ರಾಹುಲ್ ಕೋಲಕಾರ (15) ಮೃತ ವಿದ್ಯಾರ್ಥಿ. ತೀವ್ರವಾಗಿ ಎದೆ ನೋವು ಕಾಣಿಸಿಕೊಂಡಾಗ ಶಿಕ್ಷಕರು ಹಾಗೂ ಇತರ ಶಾಲಾ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದ.
ಇದನ್ನೂ ಓದಿ: ಆತಂಕ ಮೂಡಿಸುತ್ತಿರುವ ಹೃದಯಾಘಾತ ಪ್ರಕರಣ; ಒಂದೇ ದಿನದಲ್ಲಿ ನಾಲ್ವರು ಯುವಕರ ಸಾವು