ಬಾಗಲಕೋಟೆ: ಇತ್ತೀಚೆಗೆ ಸುರಿದ ಮಳೆಯಿಂದ ಶತಮಾನ ಕಂಡಿರುವ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರ ಎಸ್. ಸಿ. ಗ್ರಾಮದಲ್ಲಿರುವ ಸರಕಾರಿ ಶಾಲೆ ಇದಾಗಿದೆ. ಮಳೆಯಿಂದ ಸಂಪೂರ್ಣ ಶಾಲೆಯ ಮೇಲ್ಛಾವಣಿ ಜಖಂಗೊಂಡಿದೆ.
ಈ ಸರ್ಕಾರಿ ಶಾಲೆಯು 150 ವರ್ಷದ ಹಳೆಯದಾಗಿದೆ. ಶಾಲೆಯ ಕಟ್ಟಡ ಶಿಥಿಲಗೊಂಡಿತ್ತು. ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆ ಹೆಂಚಿನ ಮೇಲ್ಛಾವಣಿ ಕಸಿದುಬಿದ್ದಿದೆ. ಶಾಲೆಯ ಒಟ್ಟು ಐದು ಕೊಠಡಿಗಳು ಹೆಂಚಿನ ಮೇಲ್ಛಾವಣಿ ಹೊಂದಿವೆ. ಈಗಾಗಲೇ ಮೂರು ಕೊಠಡಿಗಳ ಮೇಲ್ಛಾವಣಿ ಹಾನಿಯಾಗಿವೆ. ಇನ್ನು ಎರಡು ಕೊಠಡಿಗಳು ಬೀಳುವ ಹಂತಕ್ಕೆ ತಲುಪಿವೆ. ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಯ ಕಟ್ಟಡ ಹಳೆಯದಾಗಿದ್ದು, ಶಾಲೆಯ ಕಟ್ಟಡವನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಮುಖ್ಯ ಶಿಕ್ಷಕ ಎಂ.ಜಿ. ಮಾದರ ತಿಳಿಸಿದ್ದಾರೆ. ಶಾಲೆಯಲ್ಲಿ 389 ವಿದ್ಯಾರ್ಥಿಗಳು ಓದುತ್ತಿದ್ದು, ಆದಷ್ಟು ಬೇಗನೆ ಅಧಿಕಾರಿಗಳು ಶಾಲಾ ಕಟ್ಟಡವನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಿ, ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಶಾಲಾ ಗೋಡೆ ಕುಸಿಯುವ ಭೀತಿ, ಆತಂಕದಲ್ಲಿ ವಿದ್ಯಾರ್ಥಿಗಳು: ಮತ್ತೊಂದೆಡೆ ದಾವಣೆಗೆರೆ ಜಿಲ್ಲೆಯಲ್ಲಿ ಸುರಿದ ಮಳೆಗೆ ವಿವಿಧೆಡೆ ಶಾಲಾ ಕಟ್ಟಡಗಳು ಕುಸಿಯುವ ಹಂತ ತಲುಪಿವೆ. ಜಿಲ್ಲೆಯ ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ ಕ್ಯಾಂಪ್ನಲ್ಲಿರುವ ಸರ್ಕಾರಿ ಉರ್ದು ಶಾಲೆ ದುಃಸ್ಥಿತಿಗೆ ತಲುಪಿದೆ. ಶಾಲೆಯ ಕಟ್ಟಡ ಗೋಡೆಗಳು ಆಗೋ ಈಗೋ ಬೀಳುವ ಸ್ಥಿತಿಗೆ ತಲುಪಿದ್ದು, ಮಕ್ಕಳು ಅಂಗೈಯಲ್ಲಿ ತಮ್ಮ ಜೀವ ಹಿಡಿದು ಪಾಠ ಕೇಳುವ ಪರಿಸ್ಥಿತಿ ಇಲ್ಲಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ನಲ್ಲೂರು ಸರ್ಕಾರಿ ಉರ್ದು ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಇದ್ದು, ಅಂದಾಜು 200ರಿಂದ 300ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚನ್ನಗಿರಿ ತಾಲೂಕು ಮಲೆನಾಡು ಪ್ರದೇಶವಾಗಿದ್ದು, ಭಾರಿ ಮಳೆಗೆ ಶಾಲೆಯ ಬೇರೆ ಬೇರೆ ಕೊಠಡಿಗಳ ಚಾವಣಿಗಳು ಶಿಥಿಲಗೊಂಡಿದೆ. ಇದರಿಂದ ಶಿಕ್ಷಕರು ಆತಂಕದಲ್ಲಿಯೇ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ. ಸರ್ಕಾರಿ ಉರ್ದು ಶಾಲೆ ಕಟ್ಟಡದ ಸ್ಥಿತಿಗೆ ಭಯದಿಂದ ಉಂಜಾಗ್ರತ ಕ್ರಮವಾಗಿ ಮಕ್ಕಳಿಗೆ ಬೇರೊಂದು ಕೊಠಡಿಯಲ್ಲಿ ಪಾಠ ಮಾಡಲಾಗುತ್ತಿದೆ.
ಇದನ್ನೂ ಓದಿ: ಉ.ಕ ಜಿಲ್ಲೆಯಲ್ಲಿ ಬಿರುಗಾಳಿಗೆ ಹಾರಿದ ಮನೆಗಳ ಚಾವಣಿ, ವಿದ್ಯುತ್ ಕಂಬ ಧರೆಗೆ